Fri. Mar 6th, 2026

ರಾಜ್ಯ ಸರ್ಕಾರದಿಂದ ಉದ್ಯೋಗ ಪರ್ವ: 56,432 ಹುದ್ದೆಗಳ ನೇಮಕಾತಿಗೆ ಸಂಪುಟ ಅಸ್ತು

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬೃಹತ್ ಸಂಖ್ಯೆಯ ಹುದ್ದೆಗಳ ಭರ್ತಿಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಗುರುವಾರ ಮಹತ್ವದ ಅನುಮೋದನೆ ನೀಡಿದೆ. ಒಟ್ಟು 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.

ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರು ನಿರ್ಣಯಗಳ ಕುರಿತು ಮಾಹಿತಿ ಹಂಚಿಕೊಂಡರು.”ಸುಪ್ರೀಂ ಕೋರ್ಟ್ ನೀಡಿರುವ ಶೇ. 50ರ ಮೀಸಲಾತಿ ಮಿತಿಯ ಚೌಕಟ್ಟಿನಲ್ಲೇ ಈ ನೇಮಕಾತಿಗಳನ್ನು ನಡೆಸಲಾಗುವುದು. ಆಡಳಿತದ ದಕ್ಷತೆ ಹೆಚ್ಚಿಸಲು ಮತ್ತು ಯುವಜನತೆಗೆ ಉದ್ಯೋಗಾವಕಾಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ತಿಳಿಸಿದರು.

ಮತದಾರರ ಪಟ್ಟಿ ಕುರಿತು ಸಮಿತಿ:

ಕೇಂದ್ರ ಚುನಾವಣಾ ಆಯೋಗದ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಮತ್ತು ರಾಜ್ಯದ ಸಾಂವಿಧಾನಿಕ ಹಕ್ಕುಗಳ ಕುರಿತು ಅಧ್ಯಯನ ನಡೆಸಲು ಸಂಪುಟವು ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲೇ ಸಮಿತಿ ರಚಿಸಿದೆ. ಈ ಸಮಿತಿಯು ಮಾರ್ಚ್ 10ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ಸೇವೆಗಳ ಸರಳೀಕರಣ:

ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಲು ಸುಮಾರು 28 ಸರ್ಕಾರಿ ಸೇವೆಗಳನ್ನು ಏಕಗವಾಕ್ಷಿ ಯೋಜನೆಯಡಿ ತರಲು ನಿರ್ಧರಿಸಲಾಗಿದೆ. ವಿಶೇಷವಾಗಿ ಉದ್ಯಮ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ಲಿಫ್ಟ್ ಹಾಗೂ ಎಸ್ಕಲೇಟರ್ ಪರವಾನಗಿ ವಿತರಣಾ ಅವಧಿಯನ್ನು 40 ದಿನಗಳಿಂದ 20 ದಿನಗಳಿಗೆ ಇಳಿಸಲಾಗಿದೆ.


Share this with Friends

Related Post