ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನಾರಂಭಿಸಲು ಅನುಮತಿ ನೀಡಿ ರಾಜ್ಯ ಸರ್ಕಾರವು ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಂಬರುವ ಐಪಿಎಲ್ 2026 ಸೇರಿದಂತೆ ಅಂತರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ಅಧಿಕೃತವಾಗಿ ಅನುಮತಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು.ಆದರೆ ಷರತ್ತುಗಳನ್ನು ವಿಧಿಸಿ ಪಾಲಿಸುವ ಸೂಚನೆ ನೀಡಿದೆ.
2025ರ ಐಪಿಎಲ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ಸಂಭವಿಸಿದ ಅಹಿತಕರ ಘಟನೆ ಮತ್ತು ಸುರಕ್ಷತಾ ಲೋಪಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಪಂದ್ಯಗಳ ಆಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಘಟನೆಯ ಕುರಿತು ತನಿಖೆ ನಡೆಸಿದ್ದ ಜಸ್ಟಿಸ್ ಮೈಕೆಲ್ ಡಿ’ಕುನ್ಹಾ ಸಮಿತಿಯು ಸಲ್ಲಿಸಿದ ವರದಿಯ ಶಿಫಾರಸುಗಳನ್ನು ಜಾರಿಗೆ ತರುವ ಭರವಸೆಯ ಮೇಲೆ ಈಗ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಸರ್ಕಾರದ ಪ್ರಮುಖ ಷರತ್ತುಗಳು ಮತ್ತು ಮಾರ್ಗಸೂಚಿಗಳು:
ಪ್ರೇಕ್ಷಕರ ಮಿತಿ: ಕ್ರೀಡಾಂಗಣದ ಒಟ್ಟು ಸಾಮರ್ಥ್ಯವನ್ನು ಮೀರದಂತೆ ಕಟ್ಟುನಿಟ್ಟಾಗಿ ಟಿಕೆಟ್ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಗೇಟ್ ಪಾಸ್ ಅಥವಾ ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಬಾರದು.
ಸುರಕ್ಷತಾ ಮೂಲಸೌಕರ್ಯ: ಕ್ರೀಡಾಂಗಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು (Gates) ವಿಸ್ತರಿಸಬೇಕು. ತುರ್ತು ಸಂದರ್ಭದಲ್ಲಿ ಪ್ರೇಕ್ಷಕರು ಶೀಘ್ರವಾಗಿ ಹೊರಬರಲು ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಬದಲಾವಣೆ ಮಾಡಬೇಕು.
ಸಿಸಿಟಿವಿ ಮತ್ತು ತಂತ್ರಜ್ಞಾನ: ಕ್ರೀಡಾಂಗಣದ ಸುತ್ತಮುತ್ತ ಮತ್ತು ಒಳಭಾಗದಲ್ಲಿ ಅತ್ಯಾಧುನಿಕ ಫೇಸ್ ರೆಕಗ್ನಿಷನ್ (Face Recognition) ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸ್ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಲ್ಪಿಸಬೇಕು.
ವೈದ್ಯಕೀಯ ಸೌಲಭ್ಯ: ಪಂದ್ಯದ ಅವಧಿಯಲ್ಲಿ ಕ್ರೀಡಾಂಗಣದ ಪ್ರತಿ ಸ್ಟ್ಯಾಂಡ್ ಬಳಿ ಅರೆವೈದ್ಯಕೀಯ ಸಿಬ್ಬಂದಿ ಮತ್ತು ತುರ್ತು ಚಿಕಿತ್ಸಾ ವಾಹನಗಳು (Ambulance) ಸನ್ನದ್ಧವಾಗಿರಬೇಕು.
ಸಾರಿಗೆ ವ್ಯವಸ್ಥೆ: ಪಂದ್ಯ ಮುಗಿದ ನಂತರ ಪ್ರೇಕ್ಷಕರ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಸೇವೆಯನ್ನು ಹೆಚ್ಚಿನ ಅವಧಿಗೆ ವಿಸ್ತರಿಸಲು ಕೆಎಸ್ಸಿಎ (KSCA) ಸಮನ್ವಯ ಸಾಧಿಸಬೇಕು.
ಡಿಸಿಎಂ ಪ್ರತಿಕ್ರಿಯೆ:
“ಬೆಂಗಳೂರು ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧವಾಗಿದೆ. ಕ್ರೀಡಾಭಿಮಾನಿಗಳ ಉತ್ಸಾಹ ಮತ್ತು ಸುರಕ್ಷತೆ ಎರಡೂ ನಮಗೆ ಮುಖ್ಯ. ಡಿ’ಕುನ್ಹಾ ಸಮಿತಿಯ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಷರತ್ತಿನ ಮೇಲೆ ಐಪಿಎಲ್ 2026ರ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ,” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
“ಇದು ಕ್ರಿಕೆಟ್ ಪ್ರಿಯರಿಗೆ ಇದೊಂದು ಶುಭ ಸುದ್ದಿಯಾಗಿದ್ದು, ಇಷ್ಟು ದಿನಗಳ ಕಾಲ ಅನುಭವಿಸಿದ ನೋವಿಗೆ ವಿಷಾದಿಸುತ್ತೇನೆ. ನಾವು ಒಂದು ಪ್ರತಿಷ್ಠಿತ ಪಂದ್ಯಾವಳಿ ಕಳೆದುಕೊಂಡಿದ್ದೇವೆ. ಮುಂದಿನ ಬಾರಿ ನಾವು ಜಾಗೃತರಾಗಿರೋಣ” ಎಂದು ತಿಳಿಸಿದರು.
ಈ ನಿರ್ಧಾರದಿಂದಾಗಿ ಮಾರ್ಚ್ ತಿಂಗಳಿನಿಂದ ಆರಂಭವಾಗಲಿರುವ ಐಪಿಎಲ್ ಸರಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುವುದು ಖಚಿತವಾದಂತಾಗಿದೆ.

