ನವದೆಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿದ್ದು, ರಾಜ್ಯದ ಸುಮಾರು 638 ಕನ್ನಡ ಶಾಲೆಗಳನ್ನು ಮುಚ್ಚುವ ಮೂಲಕ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರಕ್ಕೆ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲದಂತಾಗಿದೆ. ಇಂತಹ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಕನ್ನಡ ಅಸ್ಮಿತೆಗೆ ಮಾಡುತ್ತಿರುವ ಅಪಮಾನ. ಕೂಡಲೇ ಮುಚ್ಚಲ್ಪಟ್ಟಿರುವ ಕನ್ನಡ ಶಾಲೆಗಳನ್ನು ಪುನರಾರಂಭಿಸಬೇಕು,” ಎಂದು ಆಗ್ರಹಿಸಿದರು.
ಇದೇ ವೇಳೆ ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, “ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಸಂಸತ್ತಿನಲ್ಲಿ ಅವರು ನಗರ ನಕ್ಸಲರಂತೆ ವರ್ತಿಸುತ್ತಿದ್ದಾರೆ. ಬೆಂಚ್ ಮೇಲೆ ನಿಲ್ಲುವುದು, ಸ್ಪೀಕರ್ ಮೇಲೆ ದಾಳಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಪ್ರಧಾನಿ ಬರುವ ದಾರಿಯನ್ನು ತಡೆಯುವ ಮೂಲಕ ಕಾಂಗ್ರೆಸ್ ಸಂಸದರು ಸಂಸತ್ತಿನ ಇತಿಹಾಸದಲ್ಲಿ ಕಪ್ಪು ಚುಕ್ಕೆ ಬರೆದಿದ್ದಾರೆ,” ಎಂದು ಕಿಡಿಕಾರಿದರು.
“ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಲು ಆಸಕ್ತಿಯಿಲ್ಲ. ಕಲಾಪಕ್ಕೆ ತೊಂದರೆ ಕೊಡುವುದನ್ನೇ ಅವರು ಏಕೈಕ ಅಜೆಂಡಾ ಮಾಡಿಕೊಂಡಿದ್ದಾರೆ,” ಎಂದು ಬೊಮ್ಮಾಯಿ ಲೇವಡಿ ಮಾಡಿದರು

