Fri. Mar 6th, 2026

ಸರ್ಕಾರಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಬದ್ಧ: ನಿರುದ್ಯೋಗಿ ಯುವಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಭಯ

Share this with Friends

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳನ್ನು ಹಗರಣ ರಹಿತವಾಗಿ ಮತ್ತು ಪಾರದರ್ಶಕವಾಗಿ ಭರ್ತಿ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನ ನೆಹರೂ ತಾರಾಲಯದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳ ನೋವು ನಮಗೆ ಅರ್ಥವಾಗುತ್ತದೆ. ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಕುರಿತು ಶುಭ ಸಂದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಗರಣ ಮುಕ್ತ ನೇಮಕಾತಿ: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಕುಂಠಿತಗೊಂಡಿತ್ತು. ಆದರೆ ನಮ್ಮ ಸರ್ಕಾರವು ಪಾರದರ್ಶಕವಾಗಿ ಹುದ್ದೆಗಳನ್ನು ತುಂಬಲು ಯೋಜನೆ ರೂಪಿಸಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಆದ್ಯತಾ ಇಲಾಖೆಗಳು: ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೆಪಿಎಸ್‌ಸಿ ಸೇರಿದಂತೆ ನೇಮಕಾತಿ ಸಂಸ್ಥೆಗಳಿಗೆ ಈಗಾಗಲೇ ಈ ಕುರಿತು ಜವಾಬ್ದಾರಿ ವಹಿಸಲಾಗಿದೆ ಎಂದರು.

ಅಡಚಣೆಗಳ ನಿವಾರಣೆ: ಒಳಮೀಸಲಾತಿ ಮತ್ತು ತಾಂತ್ರಿಕ ಕಾರಣಗಳಿಂದ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುವುದು ಎಂದರು.

ಯುವನಿಧಿ ಆಸರೆ: ಉದ್ಯೋಗ ಸಿಗುವವರೆಗೆ ಪದವೀಧರರಿಗೆ ಶಕ್ತಿ ತುಂಬಲು ಸರ್ಕಾರ ಈಗಾಗಲೇ ‘ಯುವನಿಧಿ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಅವರು ಸ್ಮರಿಸಿದರು.

ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಯುವಕರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಯುವಕರು ಧೈರ್ಯವಾಗಿರಬೇಕು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸದಾ ಸಿದ್ಧವಿದೆ” ಎಂದು ಅಭಯ ನೀಡಿದರು.

2027ಕ್ಕೆ 175 ಕಿ.ಮೀ. ಮೆಟ್ರೋ ಗುರಿ; ರಾಜಧಾನಿಯ ಸಂಚಾರ ಸಮಸ್ಯೆಗೆ ಮುಕ್ತಿ ನೀಡಲು 2027ರ ವೇಳೆಗೆ ಮೆಟ್ರೋ ಜಾಲವನ್ನು 175 ಕಿಲೋ ಮೀಟರ್‌ಗೆ ವಿಸ್ತರಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ಗೆ ಸ್ಪಷ್ಟ ಗುರಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

“ಮೆಟ್ರೋ ಯೋಜನೆಗಳ ಬಗ್ಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಡಬಲ್ ಡೆಕ್ಕರ್ ಮೆಟ್ರೋ ವಿಚಾರದಲ್ಲಿ ಕೆಲವು ತಾಂತ್ರಿಕ ಸ್ಪಷ್ಟನೆಗಳ ಅಗತ್ಯವಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ,” ಎಂದರು.

ಬಾಕಿ ಬಿಲ್ ವಿವಾದ:

ಗುತ್ತಿಗೆದಾರರ ಬಿಲ್ ಬಾಕಿ ಕುರಿತು ಮಾತನಾಡಿದ ಡಿಸಿಎಂ, “ಹಿಂದಿನ ಬಿಜೆಪಿ ಸರ್ಕಾರವು ಆರ್ಥಿಕ ಸ್ಥಿತಿಗತಿಯನ್ನು ಲೆಕ್ಕಿಸದೆ ಕಾಮಗಾರಿಗಳಿಗೆ ಅನುಮತಿ ನೀಡಿದ್ದರಿಂದ ಈಗ ಬಿಲ್ ಪಾವತಿಯಲ್ಲಿ ಸಮಸ್ಯೆ ಎದುರಾಗಿದೆ. ಹಣದ ಲಭ್ಯತೆ ಇಲ್ಲದಿದ್ದರೂ ಕಾಮಗಾರಿ ನಡೆಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪ್ರತಿಭಟನಾ ನಿರತ ಗುತ್ತಿಗೆದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು,” ಎಂದು ತಿಳಿಸಿದರು

 

 

 


Share this with Friends

Related Post