Fri. Mar 6th, 2026

ರಾಜ್ಯ ಸರ್ಕಾರ ದಿವಾಳಿ, ಸಿದ್ದರಾಮಯ್ಯ ‘ಪಾಪರ್’ ಮುಖ್ಯಮಂತ್ರಿ: ಆರ್. ಅಶೋಕ ವಾಗ್ದಾಳಿ

Share this with Friends

ಬೆಂಗಳೂರು : “ರಾಜ್ಯದ ಕಾಂಗ್ರೆಸ್ ಸರ್ಕಾರ ಹಣವಿಲ್ಲದೆ ಸಂಪೂರ್ಣವಾಗಿ ಪಾಪರ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಪರ್ ಸಿಎಂ ಆಗಿದ್ದಾರೆ. ಜನಸಾಮಾನ್ಯರು ಮತ್ತು ಅನಾಥ ಮಕ್ಕಳು ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಶಾಸಕರು ಮಾತ್ರ ವಿದೇಶಿ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ,” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ಶಿಸ್ತಿನ ಬಗ್ಗೆ ಹರಿಹಾಯ್ದರು. ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಸುಮಾರು 26,334 ಅನಾಥ ಮಕ್ಕಳಿಗೆ ನೀಡಬೇಕಿದ್ದ ಮಾಸಿಕ 4,000 ರೂ.ಗಳ ನೆರವನ್ನು ಕಳೆದ 7 ತಿಂಗಳಿನಿಂದ ನಿಲ್ಲಿಸಲಾಗಿದೆ. ಒಟ್ಟು 75 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರ, ಬಡ ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳ ವೈಫಲ್ಯ: ಗೃಹಲಕ್ಷ್ಮಿ ಯೋಜನೆಗೆ 5,000 ಕೋಟಿ ರೂ. ಹಾಗೂ ಅನ್ನಭಾಗ್ಯ ಯೋಜನೆಗೆ 750 ಕೋಟಿ ರೂ. ಹಣ ನೀಡದೆ ಸರ್ಕಾರ ನಾಮ ಹಾಕಿದೆ. ಗ್ಯಾರಂಟಿಗಳ ಹೆಸರಲ್ಲಿ ಅನಾಥ ಮಕ್ಕಳ ಅನ್ನವನ್ನೂ ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸಾರಿಗೆ ನೌಕರರ ಸಂಕಷ್ಟ: ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಕಳೆದ 38 ತಿಂಗಳ ಹಿಂಬಾಕಿ ಹಣ ಪಾವತಿಸಿಲ್ಲ. ಶಾಲಾ ಮಕ್ಕಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಅವರು ಟಿಪ್ಪರ್‌ಗಳಲ್ಲಿ ಪ್ರಯಾಣಿಸುವ ಸ್ಥಿತಿ ಬಂದಿದೆ. ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ ಸರ್ಕಾರ ‘ಎಸ್ಮಾ’ ಜಾರಿ ಮಾಡುವ ಮೂಲಕ ಬೆದರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದೇಶಿ ಪ್ರವಾಸದ ಅಬ್ಬರ: ಒಂದು ಕಡೆ ಬಜೆಟ್‌ನಲ್ಲಿ ಘೋಷಿಸಿದ ಹಣವನ್ನು ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿಲ್ಲ, ಆದರೆ ಶಾಸಕರು ಮಾತ್ರ ಫಾರಿನ್ ಟೂರ್ ಮಾಡಲು ಹಣವಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದರು.

“ಸಿದ್ದರಾಮಯ್ಯ ಅವರು ತಾವೊಬ್ಬ ‘ಪಾಪರ್ ಮುಖ್ಯಮಂತ್ರಿ’ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳಲಿ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದ್ದು, ಕೇವಲ ಪ್ರಚಾರಕ್ಕಾಗಿ ಸರ್ಕಾರ ಅಸ್ತಿತ್ವದಲ್ಲಿದೆ,” ಎಂದು ಅಶೋಕ ಟೀಕಿಸಿದರು.

ಮಾಧ್ಯಮ ನಿರ್ಬಂಧಕ್ಕೆ ಆಕ್ರೋಶ:

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಡಿಪಿಎಆರ್ (DPAR) ಆದೇಶವನ್ನು ಪ್ರತಿಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲಿಗೆಳೆಯುತ್ತಿವೆ ಎಂಬ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದೊಂದು ‘ಲೂಟಿ ಮುಚ್ಚಿಡುವ ತಂತ್ರ’ವಾಗಿದ್ದು, ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದಾಗಿ ನಾಯಕರು ತಿಳಿಸಿದ್ದಾರೆ.


Share this with Friends

Related Post