ಚಿಕ್ಕಬಳ್ಳಾಪುರ, ಏ.16: ರಾಜ್ಯದಲ್ಲಿ ಕುಡಿಯಲು ನೀರಿಲ್ಲ,ಆದರೆ ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಇಂತಹ ಕೆಟ್ಟ ಕಾಂಗ್ರೆಸ್ಸನ್ನು ತಡೆಯಲು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ, ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿಯಲ್ಲಿ ಮತ ಪ್ರಚಾರ ನಡೆಸಿ ಅಶೋಕ ಮಾತನಾಡಿದರು.
ರಾಜ್ಯದಲ್ಲಿ ಕುಡಿಯಲು ನೀರಿಲ್ಲ,ಬರಗಾಲಕ್ಕೆ ಪರಿಹಾರವಿಲ್ಲ, ಬಿಜೆಪಿ ಸರ್ಕಾರವಿದ್ದಾಗ ಮಳೆ ಬರುತ್ತಿತ್ತು, ಕಾಂಗ್ರೆಸ್ ಸರ್ಕಾರ ಬಂದ ನಂತರ ಮಳೆ ಸ್ಥಗಿತಗೊಂಡಿದೆ ಎಂದು ವ್ಯಂಗ್ಯವಾಡಿದರು.ಈ ಸರ್ಕಾರ ಇನ್ನಾ ಆರು ತಿಂಗಳಲ್ಲಿ ಉರುಳಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದವರು ಎಲ್ಲದರ ಮೇಲೂ ತೆರಿಗೆ ವಿಧಿಸಿದ್ದಾರೆ, ಮಹಿಳೆಯರಿಗೆ ಕೊಡುವ 2,000 ರೂ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮನೆಯ ಹಣ ಅಲ್ಲಾ ಗಂಡನಿಂದ ಹಣ ಕಿತ್ತು ಅದನ್ನು ಹೆಂಡತಿಗೆ ನೀಡುತ್ತಿದ್ದಾರೆ ಎಂದು ಆಕ್ರೋಶ ಪಟ್ಟರು.
ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ,ಕೆಲವು ಕಡೆ ಬಾಂಬ್ ಸ್ಫೋಟವಾಗುತ್ತಿದೆ,ಇಂತಹ ಕಾಂಗ್ರೆಸ್ಸನ್ನು ತಡೆಯಲು ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಇದು ಸಿದ್ದರಾಮಯ್ಯನವರ ಚುನಾವಣೆ ಅಲ್ಲ,ಇದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ಚುನಾವಣೆ. ಆದರೆ ಜನರು ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡುತ್ತಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕಾಂಗ್ರೆಸ್ ಗೂಂಡಾಗಳು ಅವಾಚ್ಯ ಪದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿಯೇ ಆ ಪಕ್ಷ ಧೂಳಿಪಟ ಆಗಿದೆ ಎಂದು ಗುಡುಗಿದರು.
ಕಳೆದ ಬಾರಿ ಕಾಂಗ್ರೆಸ್ ನಾಯಕರು ಎಚ್.ಡಿ.ದೇವೇಗೌಡರ ಮನೆಯ ಬಳಿ ಹುಚ್ಚು ನಾಯಿಯಂತೆ ಹೋಗಿದ್ದರು. ಎರಡು ಬಾರಿ ಅವರ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಅದೇ ಕಾಂಗ್ರೆಸ್ ನಾಯಕರು ಈಗ ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿರುವುದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು ಎಂದು ಅಶೋಕ್ ತಿಳಿಸಿದರು.
ಲೋಕಸಭೆ ಚುನಾವಣೆಯ ಸರ್ವೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂಬ ಫಲಿತಾಂಶ ಬಂದಿದೆ. ಆದರೆ ನಾವೇನೂ ಸರ್ಕಾರವನ್ನು ಮುಳುಗಿಸಲು ಹೋಗುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಕಚ್ಚಾಡುತ್ತಿದ್ದು,ಅವರೇ ಸರ್ಕಾರವನ್ನು ಮುಳುಗಿಸಲಿದ್ದಾರೆ,ಇನ್ನು ಆರು ತಿಂಗಳಲ್ಲಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.