ಮೈಸೂರು: ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದ ಸ್ಪರ್ಧಿಗಳಿಗೆ ಜನರು ಸಿಳ್ಳೆ, ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.
ಮೈಸೂರು ದಸರಾ ಮಹೋತ್ಸವ-2024ರ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನವನ್ನು ಶಾಸಕರುಗಳಾದ ಕೆ.ಹರೀಶ್ ಗೌಡ ಹಾಗೂ ಡಿ.ರವಿಶಂಕರ್ ಅವರು ವಿತರಿಸಿದರು.
ಈ ವೇಳೆ ಕೆ.ಹರೀಶ್ ಗೌಡ ಮಾತನಾಡಿ,ಕಳೆದ ವರ್ಷಗಳಿಂದ ಕೇವಲ 50,000 ಮತ್ತು 30,000 ಮಾತ್ರ ಬಹುಮಾನ ನೀಡುತ್ತಿದ್ದು, ಆದರೆ ಈ ಬಾರಿ ನಮ್ಮ ಸರ್ಕಾರ ಪ್ರಥಮ ಬಹುಮಾನಕ್ಕೆ ಒಂದು ಲಕ್ಷ, ದ್ವಿತೀಯ ಬಹುಮಾನಕ್ಕೆ 80,000 ಸಾವಿರ, ತೃತೀಯ ಬಹುಮಾನಕ್ಕೆ 60,000, ಹಾಗೂ ಕೊನೆಯ ಬಹುಮಾನಕ್ಕೆ 40,000 ರೂಗಳನ್ನು ನೀಡಲು ತೀರ್ಮಾನಿಸಿ ಅದರಂತೆ ಬಹುಮಾನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಹಾಲು ಕರೆಯುವ
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 8 ಹಸುಗಳು ಭಾಗವಹಿಸಿದ್ದು, ಒಟ್ಟು 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅದರಲ್ಲಿ ಇಂದು ಬೆಳಿಗ್ಗೆ ಮತ್ತು ಸಂಜೆ ಅಂತಿಮ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ಕರೆದ ಸ್ಪರ್ಧಿಗೆ ಪ್ರಶಸ್ತಿ ನೀಡಲಾಯಿತು.
ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನಿಷ್ ಪಾರಂ ಡೈರಿಯ ರಾಮಚಂದ್ರ ರೆಡ್ಡಿ ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ 42.840 ಲೀ ಹಾಲು ಕರೆಯುವ ಮೂಲಕ 1 ಲಕ್ಷ ರೂ ನಗದು ಗಳಿಸಿಕೊಂಡು ಪ್ರಥಮ ಸ್ಥಾನ ಪಡೆದುಕೊಂಡರು.
ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿ ಗ್ರಾಮದ ಬಾಬು ಬಿನ್ ರೇವಣ್ಣ ಅವರು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 42.300 ಲೀ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 80 ಸಾವಿರ ರೂ ಹಣ ಪಡೆದುಕೊಂಡರು.
ಆನೇಕಲ್ ತಾಲ್ಲೂಕಿನ ವೆಟ್ ಫಾರಂ, ನಕುಂದಿ, ದೊಮ್ಮಸಂದ್ರ, ಅಜಯ್.ಪಿ ರೆಡ್ಡಿ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ – 41.300 ಲೀ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ 60 ಸಾವಿರ ನಗದು ಪಡೆದುಕೊಂಡರು.
ಎಚ್ ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಎಜಿಎಂ ಡೈರಿ ಫಾರಂ ದೇವರಾಜ್ ಅವರ ಹಸು ಬೆಳಗ್ಗೆ ಮತ್ತು ಸಂಜೆ ಎರಡೂ ಸೇರಿ 40.580 ಲೀ ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡು 40 ಸಾವಿರ ಹಣ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ವಿಜೇತರಿಗೆ ನಗದು ಬಹುಮಾನ ಜೊತೆಗೆ ಹಾಲಿನ ಕ್ಯಾನ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು, ಉಳಿದ ಎಲ್ಲಾ ಸ್ಪರ್ಧಿಗಳಿಗೂ ಹಾಲಿನ ಕ್ಯಾನ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರೈತ ದಸರಾ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಕೃಷ್ಣರಾಜು, ಮುಖಂಡರಾದ ಬಿ.ಜೆ ವಿಜಯಕುಮಾರ್,ರೈತ ದಸರಾ ಉಪ ಸಮಿತಿಯ ಉಪಾಧ್ಯಕ್ಷ ಮಂಜುನಾಥ್ , ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಗೋಪಿ, ರೈತ ದಸರಾ ಉಪ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.