ಬೆಂಗಳೂರು: ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರ ಇವತ್ತು ಕರ್ನಾಟಕದಲ್ಲಿ ಪುನರಾವರ್ತನೆ ಆಗಿದೆ. ವಿಧಾನಸೌಧದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದೆ. ಲಕ್ಷಾಂತರ ರೂ. ಹಣ ಸಿಕ್ಕಿದೆ. ಇದನ್ನು ಯಾರು ಮಾಡಿದ್ದಾರೆ? ಇದು ಹೇಡಿಗಳ ಕೆಲಸ ಎಂದು ಪ್ರಧಾನಿ ಮೋದಿ ವಿರುದ್ಧ ಹೇಡಿ ಪದ ಬಳಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು,ಮೋದಿ ಅವರ ವ್ಯಕ್ತಿತ್ವ ಎಂಥದ್ದು? ರಾಹುಲ್ ಗಾಂಧಿಯವರ ವ್ಯಕ್ತಿತ್ವ ಎಂಥದ್ದು? ಎಂದು ಕೇಳಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಮನೆಮನೆಗೆ ಹಾಸುಹೊಕ್ಕಾಗಿರುವ ಸರಕಾರದ ನೇತೃತ್ವ ವಹಿಸಿದ ಸಿದ್ದರಾಮಯ್ಯರದು ಎಂಥ ನೇತೃತ್ವ? ಇದೆಲ್ಲವನ್ನೂ ಆತ್ಮಾವಲೋಕನ ಮಾಡಿಕೊಳ್ಳಲು ಸಲಹೆ ನೀಡಿದರು.
ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂದು ಕರೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.ಆ ಶಬ್ದವೇ ನರೇಂದ್ರ ಮೋದಿ ಅವರಿಗೆ ಅನ್ವಯಿಸುವುದಿಲ್ಲ. ಯುಪಿಎ ಸರಕಾರ ಇದ್ದ ಸಂದರ್ಭದಲ್ಲಿ ಎಂಥೆಂಥ ಸಮಸ್ಯೆಗಳನ್ನು ಇವರು ಬಿಟ್ಟು ಹೋಗಿದ್ದರು? ಎಂಬುದು ಚೆನ್ನಾಗಿ ಗೊತ್ತಿದೆ. ಇಡೀ ದೇಶಕ್ಕೆ ದೇಶವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣ, ಕ್ರೀಡಾ ಕ್ಷೇತ್ರದ ಕಾಮನ್‍ವೆಲ್ತ್ ಗೇಮ್ಸ್ ಹಗರಣ ಸೇರಿ ಸರಣಿ ಹಗರಣಗಳು ನಡೆದಿದ್ದವು; ಲಕ್ಷ ಲಕ್ಷ ಕೋಟಿಗಳ ಭ್ರಷ್ಟಾಚಾರ ದೇಶದಲ್ಲಿ ಮನೆಮಾತಾಗಿತ್ತು ಎಂದು ಗಮನ ಸೆಳೆದರು.
ಇವತ್ತು ಭ್ರಷ್ಟಾಚಾರದ ಶಬ್ದವೇ ಇಲ್ಲ; ಇಂಥ ಸಾಹಸದ ಕೆಲಸವನ್ನು ಮಾಡಿದ್ಯಾರು? ಸಿದ್ದರಾಮಯ್ಯನವರು ಒಂದು ಗಂಟೆ ಶಾಂತವಾಗಿ ಕುಳಿತು ತಮ್ಮ ಸರಕಾರವನ್ನು ಏನೆಂದು ಕರೆಯುತ್ತಾರೆ? ಮೋದಿಜೀ ಸರಕಾರವನ್ನು ಏನೆಂದು ಕರೆಯುತ್ತಿದ್ದಾರೆಂದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದೆಂದು ಸಲಹೆ ನೀಡಿದರು.
ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‍ನವರು ದೂರು ನೀಡಿದ್ದಾರೆ. ಗುತ್ತಿಗೆದಾರರ ಸಂಘವೂ ದೂರು ಕೊಟ್ಟಿದೆ. ಕಾರ್ಮಿಕರ ಇಲಾಖೆ ಮತ್ತಿತರ ಇಲಾಖೆಗೆ ಸಂಬಂಧಿಸಿ ಸಿಎಜಿ ವರದಿಯೂ ಬಂದಿದೆ. ಇದೀಗ ಚಿನ್ನ, ಹಣ ಸಿಗುತ್ತಿದೆ. ಲೈಸನ್ಸ್‍ಗಳು ಹಣಕ್ಕೆ ಮಾರಾಟ ಆಗುತ್ತಿವೆ. ಇದೆಲ್ಲ ಹೇಡಿಗಳ ಸರಕಾರದಲ್ಲಿ ನಡೆಯಲು ಸಾಧ್ಯ ಎಂದು ತಿಳಿಸಿದರು.

