Fri. Mar 6th, 2026

ರಾಜ್ಯದ 10ನೇ ಗ್ಯಾರಂಟಿ ‘ಉಚಿತ ಆರೋಗ್ಯ’: ಅಂಕೋಲಾದಲ್ಲಿ ಡಿ.ಕೆ. ಶಿವಕುಮಾರ್ ಘೋಷಣೆ

Share this with Friends

ಅಂಕೋಲಾ: ರಾಜ್ಯದ ಜನತೆಗೆ ಈಗಾಗಲೇ ಐದು ಗ್ಯಾರಂಟಿಗಳನ್ನು ತಲುಪಿಸಿರುವ ಕಾಂಗ್ರೆಸ್ ಸರ್ಕಾರ, ಇದೀಗ ಹತ್ತನೇ ಗ್ಯಾರಂಟಿಯಾಗಿ ‘ಉಚಿತ ಆರೋಗ್ಯ’ ಸೇವೆಯನ್ನು ನೀಡಲು ಸಜ್ಜಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕಾರವಾರ ಪ್ರವಾಸದ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಸರ್ಕಾರದ ಗ್ಯಾರಂಟಿ ಯೋಜನೆಗಳ ಸರಣಿಯನ್ನು ವಿವರಿಸಿದರು, “ನಾವು ಕೇವಲ ಐದು ಗ್ಯಾರಂಟಿಗಳಿಗೆ ಸೀಮಿತವಾಗಿಲ್ಲ. ಈಗಾಗಲೇ ಭೂಮಿ (6ನೇ), ನೀರು (7ನೇ), ವಸತಿ (8ನೇ) ಮತ್ತು ಇ-ಖಾತಾ (9ನೇ) ಯೋಜನೆಗಳನ್ನು ಘೋಷಿಸಿದ್ದೇವೆ. ಇದೀಗ 10ನೇ ಗ್ಯಾರಂಟಿಯಾಗಿ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.

ಗಂಗಾವಳಿ ಸೇತುವೆ ಲೋಕಾರ್ಪಣೆ:

ಬಹಳ ದಿನಗಳ ನಿರೀಕ್ಷೆಯಾಗಿದ್ದ ಮಂಜಗುಣಿ-ಗಂಗಾವಳಿ ಸಂಪರ್ಕಿಸುವ ನೂತನ ಸೇತುವೆಯನ್ನು ಮುಖ್ಯಮಂತ್ರಿಗಳೊಂದಿಗೆ ಉದ್ಘಾಟಿಸಿದ ಡಿ.ಕೆ.ಶಿ, ಈ ಭಾಗದ ಪ್ರವಾಸೋದ್ಯಮ ಮತ್ತು ಮೀನುಗಾರಿಕೆಗೆ ಈ ಸೇತುವೆ ಹೊಸ ಆಯಾಮ ನೀಡಲಿದೆ ಎಂದರು.

ದೇವಸ್ಥಾನಕ್ಕೆ ವಿಶೇಷ ಭೇಟಿ:

ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್, “ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಮಾಡಿಕೊಂಡಿದ್ದ ಸಂಕಲ್ಪ ಈಡೇರಿದೆ. ಈ ಕ್ಷೇತ್ರದ ಮೇಲೆ ನನಗೆ ಅಪಾರ ಭಕ್ತಿಯಿದೆ” ಎಂದು ಭಾವುಕರಾಗಿ ನುಡಿದರು.

ಕರಾವಳಿ ಅಭಿವೃದ್ಧಿಗೆ ಹೊಸ ನೀತಿ:

ಕರ್ನಾಟಕದ 300 ಕಿ.ಮೀ ಉದ್ದದ ಕರಾವಳಿ ತೀರವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡಲು ಪ್ರತ್ಯೇಕ ‘ಕರಾವಳಿ ಪ್ರವಾಸೋದ್ಯಮ ನೀತಿ’ಯನ್ನು ಜಾರಿಗೆ ತರಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಅವರು ಭರವಸೆ ನೀಡಿದರು.


Share this with Friends

Related Post