ಹಾವೇರಿ(ಹಾನಗಲ್):ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಆ ದೂರದೃಷ್ಟಿಯಿಂದಾಗಿಯೇ ದೇಶದಲ್ಲಿ ಎನ್ಇಪಿ ಜಾರಿಗೆ ತರಲಾಗಿದೆ ಆದರೆ ಕರ್ನಾಟಕದ ಮಕ್ಕಳು ಮಾತ್ರ ಇದರಿಂದ ವಂಚಿತರಾಗಬೇಕಾಗಿದೆ ಎಂದು ರಾಜ್ಯ ಸರ್ಕಾರದ ನಿಲುವಿಗೆ ಸಂಸದ ಬಸವರಾಜ ಬೊಮ್ಮಾಯಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ ನವೋತ್ಸವ – 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣದ ಭವ್ಯ ಭವಿಷ್ಯಕ್ಕಾಗಿ ವಿಕಸಿತ ಭಾರತಕ್ಕಾಗಿ ದೂರ ದೃಷ್ಟಿ ಇಟ್ಟುಕೊಂಡು ಎನ್‌ಇಪಿ ಜಾರಿಗೆ ತಂದಿದ್ದಾರೆ. ಯಾವ ರಾಜ್ಯದಲ್ಲಿ ಎನ್‌ಇಪಿ ತಂದಿದ್ದಾರೊ, ಆ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತದೆ.ದೇಶದಲ್ಲಿ ಇದನ್ನು ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ನಾನು ಆದರೆ ದುರ್ದೈವದ ಸಂಗತಿ ಎಂದರೆ ಇಂದು ಕರ್ನಾಟಕದ ಶಾಲೆಗಳಲ್ಲಿ ಎನ್ಇಪಿ ಜಾರಿಯಿಲ್ಲದಿರುವುದರಿಂದ ಕರ್ನಾಟಕದ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ ಎಂದರು.
ಇಲ್ಲಿ ನೀವು ನಮ್ಮ ಹೊಸ ಶಿಕ್ಷಣ ನೀತಿ ಅಳವಡಿಸಿಕೊಂಡಿದ್ದೀರಿ, ಇದರಿಂದ ಮಕ್ಕಳು ವಿವಿಧ ಆಯಾಮದಲ್ಲಿ ಶಿಕ್ಷಣ ಪಡೆಯಬಹುದು. ನೀವು ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತು, ಜ್ಞಾನ ಪಡೆದು ಈ ಸಂಸ್ಥೆಗೆ ನೀಡಬೇಕು. ಈ ಸಂಸ್ಥೆ ಸರಸ್ವತಿಯ ವಾಹನ ಇದ್ದಹಾಗೆ ಸರಸ್ವತಿ ವಾಹನ ಪರಮಹಂಸ, ಪರಮಹಂಸ ಅತಿ ದೊಡ್ಡ ಪಕ್ಷಿ . ಅದು ಹದ್ದಿಗಿಂತಲೂ ಎತ್ತರಕ್ಕೆ ಹಾರುತ್ತದೆ. ಕೈಲಾಸ ಮಾನಸ ಸರೋವರಕ್ಕೆ ಹೋದರೆ ಪರಮಹಂಸ ಪಕ್ಷಿ ಸಿಗುತ್ತದೆ. ಇದರಿಂದ ನೀವು ಹಿಮಾಲಯದ ಎತ್ತರಕ್ಕೆ ಹಾರಬಹುದು. ನೀವು ಬಯಸಿದಷ್ಟು ಎತ್ತರಕ್ಕೆ ಹಾರಬಹುದು. ನೀವು ಬಹಳ ಅದೃಷ್ಟ ಶಾಲಿಗಳು, ಜ್ಞಾನ ಪಡೆದು ಎತ್ತರಕ್ಕೆ ಬೆಳೆದು ಉನ್ನತ ಸಾಧನೆ ಮಾಡಿ ಎಂದು ಆಶಿಸಿದರು.
ಎಲ್ಲಕ್ಕಿಂತ ಎತ್ತರವಾಗಿರುವ ಶಿಖರ ಮೌಂಟ್ ಎವರೆಸ್ಟ್ ಹತ್ತಿರುವ ಮೊದಲನೇ ಭಾರತೀಯ ಥೇನ್ ಸಿಂಗ್. ಆತ ಕುರುಬ ಸಮುದಾಯಕ್ಕೆ ಸೇರಿದವನು. ಅವನ ತಾಯಿಯ ಬಳಿ ಇವತೈದು ಕುರಿಗಳಿದ್ದವು. ಅವುಗಳನ್ನು ಥೇನ್ ಸಿಂಗ್‌ಗೆ ಮೆಯಿಸಿಕೊಂಡು ಬರಲು ಕಳುಹಿಸುತ್ತಿದ್ದಳು. ಅವನಿಗೆ ಪ್ರತಿ ದಿನ ಊಟ ಕಟ್ಟಿಕೊಂಡು ಬರುತ್ತಿದ್ದಳು. ಆಗ ಅವನಿಗೆ ಮೌಂಟ್ ಎವರೆಸ್ಟ್ ತೋರಿಸಿ ನೀನು ಇದನ್ನು ಹತ್ತುತ್ತಿಯಾ ಎಂದು ಕೇಳುತ್ತಿದ್ದಳು. ಆತ ತನ್ನ ನಲವತ್ತೆರಡನೇ ವಯಸ್ಸಿನಲ್ಲಿ ಹತ್ತಿದ. ಆತನಿಗೆ ಪರ್ತಕರ್ತರು ಪ್ರಶ್ನೆ ಕೇಳಿದಾಗ ನಾನು ಹತ್ತನೇ ವಯಸ್ಸಿನಲ್ಲಿಯೇ ಇದನ್ನು ಹತ್ತಿದ್ದೇನೆ. ನನ್ನ ತಾಯಿ ಕೇಳಿದಾಗಲೇ ಇದನ್ನು ಹತ್ತಲು ತೀರ್ಮಾನಿಸಿದ್ದೆ ಎಂದು ಹೇಳಿದ. ಒಮ್ಮೆ ವಿದ್ಯಾರ್ಥಿ ಆದ ಮೇಲೆ ಜೀವನ ಪರ್ಯಂತ ವಿದ್ಯಾರ್ಥಿಯೇ ಶಾಲೆಯಲ್ಲಿ ಸಿಲೆಬಸ್ ಇರುತ್ತದೆ. ಶಿಕ್ಷಕರು ಕಲಿಸುತ್ತಾರೆ. ನಂತರ ಪರೀಕ್ಷೆ ಇರುತ್ತದೆ. ಜೀವನದಲ್ಲಿ ಪ್ರತಿದಿನ
ಪರೀಕ್ಷೆ ಇರುತ್ತದೆ. ನಂತರ ಪಾಠ ಕಲಿಯುತ್ತೇವೆ. ಜ್ಞಾನ ಪಡೆಯಲು ಯಾವಾಗಲೂ ಆಸಕ್ತಿ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

