Sat. Mar 7th, 2026

ರಾಜ್ಯದ ಆರ್ಥಿಕ ಶಿಸ್ತು ಹದಗೆಟ್ಟಿದೆ: ಸಿಎಂ ವಿರುದ್ಧ ಆರ್. ಅಶೋಕ್ ವಾಗ್ದಾಳಿ

Share this with Friends

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ 2026-27ರ ಬಜೆಟ್ ಕೇವಲ ಸಾಲದ ಹೊರೆಯಾಗಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನಿರ್ವಹಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.”ಒಟ್ಟು 4.48 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ ಮೀಸಲಿಟ್ಟಿರುವುದು ಕೇವಲ 74,682 ಕೋಟಿ ರೂಪಾಯಿ ಮಾತ್ರ. ಇದು ಒಟ್ಟು ಬಜೆಟ್‌ನ ಶೇ. 16-17ರಷ್ಟು ಮಾತ್ರವಾಗಿದ್ದು, ಅಭಿವೃದ್ಧಿ ಕಾಮಗಾರಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಲದ ಸುಳಿ:

ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿ ತಲುಪಿರುವುದನ್ನು ಉಲ್ಲೇಖಿಸಿದ ಅವರು, “ಈ ವರ್ಷ ಹೊಸದಾಗಿ 1.32 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುತ್ತಿದೆ. ಸಾಲ ಮಾಡುವುದು ತಪ್ಪಲ್ಲ, ಆದರೆ ಆ ಹಣವನ್ನು ಆಸ್ತಿ ಸೃಜನೆಗೆ ಬಳಸದೆ, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ (ರಾಜಸ್ವ ಕೊರತೆ ನೀಗಿಸಲು) ಬಳಸುತ್ತಿರುವುದು ಶೋಚನೀಯ” ಎಂದು ಕಿಡಿಕಾರಿದ್ದಾರೆ.

ಕೇಂದ್ರದ ಮಾದರಿ ಅನುಸರಿಸಿ:

ಕೇಂದ್ರ ಸರ್ಕಾರವು ತನ್ನ ಸಾಲದ ಬಹುಭಾಗವನ್ನು ಮೂಲಸೌಕರ್ಯ ಮತ್ತು ಬಂಡವಾಳ ವೆಚ್ಚಕ್ಕೆ (GDPಯ ಶೇ. 3.4) ಬಳಸುತ್ತಿದೆ. ಆದರೆ ರಾಜ್ಯ ಸರ್ಕಾರವು ಉತ್ಪಾದಕ ಆಸ್ತಿಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ. 17 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ‘ಬಂಡವಾಳ ವೆಚ್ಚ’ದ ಬಗ್ಗೆ ಪಾಠ ಮಾಡುವ ಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಅವರು ಲೇವಡಿ ಮಾಡಿದ್ದಾರೆ.

ಸಾಲದ ಬಳಕೆಯ ಗುಣಮಟ್ಟದ ಪ್ರಶ್ನೆ:

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲದ ನೀತಿಗಳನ್ನು ತುಲನೆ ಮಾಡಿದ ಅವರು, “ಕೇಂದ್ರ ಸರ್ಕಾರವು ಸಾಲದ ಹಣವನ್ನು ರಸ್ತೆ, ರೈಲ್ವೆ ಸೇರಿದಂತೆ ಉತ್ಪಾದಕ ಆಸ್ತಿಗಳ ನಿರ್ಮಾಣಕ್ಕೆ ಬಳಸುತ್ತಿದೆ. ಇದರಿಂದ ದೇಶದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರವು ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳನ್ನು ಸರಿದೂಗಿಸಲು ಸಾಲದ ಮೊರೆ ಹೋಗುತ್ತಿರುವುದು ದುರದೃಷ್ಟಕರ” ಎಂದಿದ್ದಾರೆ.

ಆತ್ಮವಂಚನೆಯ ಬಜೆಟ್:

“ಪ್ರಶ್ನೆ ಇಲ್ಲಿ ಸಾಲದ ಪ್ರಮಾಣದ ಬಗ್ಗೆ ಅಲ್ಲ, ಬದಲಾಗಿ ಆ ಸಾಲವನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ ಇದೆ. ಮೂಲಸೌಕರ್ಯಕ್ಕೆ ಬಳಸುವ ಸಾಲವು ಭವಿಷ್ಯದ ಶಕ್ತಿಯಾದರೆ, ದಿನನಿತ್ಯದ ಖರ್ಚಿಗೆ ಮಾಡುವ ಸಾಲವು ಜನರ ಮೇಲೆ ಕೇವಲ ಹೊರೆಯಾಗಲಿದೆ. 17 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಈ ಆರ್ಥಿಕ ಸತ್ಯಗಳು ತಿಳಿದಿಲ್ಲ ಎಂದೇನಿಲ್ಲ. ಆದರೂ ಕುರ್ಚಿ ಉಳಿಸಿಕೊಳ್ಳುವ ಹಪಾಹಪಿಯಿಂದ ಅವರು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ರಾಜಕೀಯ ದುರಂತ:

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದು ಎಲ್ಲರಿಗಿಂತ ಮುಖ್ಯಮಂತ್ರಿಗಳಿಗೇ ಚೆನ್ನಾಗಿ ಗೊತ್ತಿದೆ. ಆದರೆ ರಾಜಕೀಯ ಅಸ್ತಿತ್ವಕ್ಕಾಗಿ ರಾಜ್ಯದ ಆರ್ಥಿಕ ಶಿಸ್ತನ್ನು ಬಲಿ ಕೊಡುತ್ತಿರುವುದು ಅವರ ದೀರ್ಘಕಾಲದ ರಾಜಕೀಯ ಜೀವನದ ದೊಡ್ಡ ದುರಂತ ಎಂದು ಅವರು ಟೀಕಿಸಿದ್ದಾರೆ.


Share this with Friends

Related Post