Fri. Mar 6th, 2026

ಕೇಂದ್ರದ ಅಸಹಕಾರದ ನಡುವೆಯೂ ರಾಜ್ಯದ ಪ್ರಗತಿ: ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು: 2026-27ನೇ ಸಾಲಿನ ಆಯವ್ಯಯವು ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದೆ. ಕೇಂದ್ರದ ತೆರಿಗೆ ನೀತಿಗಳಿಂದ ರಾಜ್ಯಕ್ಕೆ ಆರ್ಥಿಕ ಹಿನ್ನಡೆಯಾಗುತ್ತಿದ್ದರೂ, ಅಭಿವೃದ್ಧಿ ದರದಲ್ಲಿ ಕರ್ನಾಟಕವು ರಾಷ್ಟ್ರೀಯ ಸರಾಸರಿಗಿಂತ ಮುಂದಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಎಸ್‌ಟಿ ಜಾರಿಯಾದ ಎಂಟು ವರ್ಷಗಳ ನಂತರ ಕೇಂದ್ರ ಸರ್ಕಾರ ಕೈಗೊಂಡ ದರ ತರ್ಕಬದ್ಧಗೊಳಿಸುವ ಪ್ರಕ್ರಿಯೆಯಿಂದ ರಾಜ್ಯದ ತೆರಿಗೆ ಸಂಗ್ರಹಣೆಯ ಪಾಲು ಶೇ. 10ರಿಂದ ಶೇ. 4ಕ್ಕೆ ಕುಸಿದಿದೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಪ್ರಸಕ್ತ ವರ್ಷ ರಾಜ್ಯಕ್ಕೆ ಅಂದಾಜು ₹10,000 ಕೋಟಿ ನಷ್ಟವಾಗಿದ್ದು, ಮುಂದಿನ ವರ್ಷ ಈ ಮೊತ್ತ ₹15,000 ಕೋಟಿಗೆ ಏರಿಕೆಯಾಗುವ ಭೀತಿಯಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರದ ಮಲತಾಯಿ ಧೋರಣೆಯಿಂದಾಗಿ ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನದಲ್ಲಿ ಕೊರತೆಯುಂಟಾಗಿದೆ ಎಂದು ಅವರು ದೂರಿದರು.

ರಾಷ್ಟ್ರೀಯ ಸರಾಸರಿ ಮೀರಿಸಿದ ರಾಜ್ಯದ ಪ್ರಗತಿ:

ರಾಜ್ಯದ ಆರ್ಥಿಕತೆಯು ಸದೃಢವಾಗಿದ್ದು, 2025-26ನೇ ಸಾಲಿನಲ್ಲಿ ಕರ್ನಾಟಕದ ಜಿಎಸ್‌ಡಿಪಿ (GSDP) ಬೆಳವಣಿಗೆ ದರವು ಶೇ. 8.1 ರಷ್ಟಿದೆ. ಇದು ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಯಾದ ಶೇ. 7.4 ಕ್ಕಿಂತ ಹೆಚ್ಚಿರುವುದು ರಾಜ್ಯದ ಆರ್ಥಿಕ ಚೇತರಿಕೆಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಕಳೆದ ಮೂರು ವರ್ಷಗಳಿಂದ ಹಣಕಾಸು ನಿರ್ವಹಣೆಯಲ್ಲಿ ಆರ್ಥಿಕ ಶಿಸ್ತು ಕಾಯ್ದೆಯ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳು ಹಾಗೂ ಜಲಜೀವನ ಮಿಷನ್:

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಈವರೆಗೆ ₹1,21,591 ಕೋಟಿ ವೆಚ್ಚ ಮಾಡಲಾಗಿದ್ದು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಜಲಜೀವನ ಮಿಷನ್ ಯೋಜನೆಯಲ್ಲಿ ಕೇಂದ್ರದ ಪಾಲು ₹30,880 ಕೋಟಿ ಇದ್ದರೂ, ಇದುವರೆಗೆ ಬಂದಿರುವುದು ಕೇವಲ ₹11,786 ಕೋಟಿ ಮಾತ್ರ. ಕೇಂದ್ರದ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರವೇ ಸ್ವತಃ ₹38,600 ಕೋಟಿ ಹಾಗೂ ಹೆಚ್ಚುವರಿಯಾಗಿ ₹15,500 ಕೋಟಿ ವ್ಯಯಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ :

ದೇಶದ ಸಾಲದ ಪ್ರಮಾಣ ಹಾಗೂ ಕೇಂದ್ರದ ಹೊಸ ಕಾಯ್ದೆಗಳ ಕುರಿತು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಹೊಸ ಉದ್ಯೋಗ ಖಾತರಿ ಕಾಯ್ದೆಯಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಅಂಕಿಅಂಶಗಳ ಸಮೇತ ವಿವರಿಸಿದರು.

ಕೇಂದ್ರದ ಸಾಲದ ಮಿತಿ ಮೀರಿದ ಏರಿಕೆ:

ಕೇಂದ್ರದ ವಿತ್ತೀಯ ಕೊರತೆ ಶೇ. 4.4 ರಷ್ಟಿದ್ದು, ದೇಶದ ಒಟ್ಟು ಸಾಲ ₹218 ಲಕ್ಷ ಕೋಟಿ ದಾಟಿದೆ ಎಂದು ಸಿಎಂ ಕಿಡಿಕಾರಿದರು. “2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದ ಸಾಲ ₹53.11 ಲಕ್ಷ ಕೋಟಿ ಇತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಅದು ₹165 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸಾಲ ಮಾಡದೆ ಅಭಿವೃದ್ಧಿ ಸಾಧ್ಯವಿಲ್ಲ, ಆದರೆ ಅದು ಮಿತಿಯಲ್ಲಿರಬೇಕು. ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ಆರ್‌ ಅಶೋಕ್ ಅವರಿಗೆ ಯಾವುದೇ ನೈತಿಕತೆ ಇಲ್ಲ” ಎಂದು ಅವರು ತಿರುಗೇಟು ನೀಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಸಾಲ ₹5,33,847 ಕೋಟಿ ಇತ್ತು ಎಂದು ಅವರು ಸ್ಪಷ್ಟಪಡಿಸಿದರು.

ಮನರೇಗಾ ಹಕ್ಕು ಕಸಿದುಕೊಂಡ ವಿಬಿ ಜಿ ರಾಮ್ ಜಿ ಕಾಯ್ದೆ:

2005ರಲ್ಲಿ ಆರಂಭವಾದ ಮನರೇಗಾ ಯೋಜನೆಗೆ ಮೊದಲು ಕೇಂದ್ರವೇ ಪೂರ್ಣ ಅನುದಾನ ನೀಡುತ್ತಿತ್ತು. ಆದರೆ ಈಗಿನ ‘ವಿಬಿ ಜಿ ರಾಮ್ ಜಿ’ ಕಾಯ್ದೆಯಿಂದಾಗಿ ರಾಜ್ಯಗಳು ಶೇ. 40ರಷ್ಟು ಪಾಲು ನೀಡಬೇಕಾಗಿದೆ. ಇದರಿಂದ ಕರ್ನಾಟಕದ ಮೇಲೆ ₹3,000 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು. 77 ಲಕ್ಷ ಜನರಿಗೆ ಸಿಗುತ್ತಿದ್ದ ಉದ್ಯೋಗದ ಹಕ್ಕನ್ನು ಈ ಕಾಯ್ದೆ ಕಸಿದುಕೊಂಡಿದೆ. ಇದು ಗ್ರಾಮ ಸಭೆಗಳ ಅಧಿಕಾರವನ್ನು ಮೊಟಕುಗೊಳಿಸಿ ಸಂವಿಧಾನದ 73ನೇ ಕಲಂಗೆ ಚ್ಯುತಿ ತಂದಿದೆ. ಈ ಹೊಸ ಕಾಯ್ದೆ ರದ್ದುಪಡಿಸಿ ಹಳೆಯ ಮನರೇಗಾ ಪದ್ಧತಿಯನ್ನೇ ಮುಂದುವರಿಸಲು ಕೇಂದ್ರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.

56,432 ಹುದ್ದೆಗಳ ಭರ್ತಿ ಹಾಗೂ ವಯೋಮಿತಿ ಸಡಿಲಿಕೆ:

ರಾಜ್ಯದ ನಿರುದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದ ಮುಖ್ಯಮಂತ್ರಿಗಳು, ಈ ವರ್ಷ ವಿವಿಧ ಇಲಾಖೆಗಳ ಖಾಲಿ ಇರುವ 56,432 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಘೋಷಿಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬವನ್ನು ಸರಿದೂಗಿಸಲು ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಇದು ಲಕ್ಷಾಂತರ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ:

ರಾಜ್ಯದ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರೊ. ಎಂ. ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳನ್ನು ಸಚಿವ ಸಂಪುಟ ಅಂಗೀಕರಿಸಿದ್ದು, ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಈ ಶಿಫಾರಸ್ಸುಗಳ ಜಾರಿಗೆ ಪ್ರಸಕ್ತ ಸಾಲಿನಲ್ಲಿ ₹4,291 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಹಂತ ಹಂತವಾಗಿ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ: ಭೂಸಂತ್ರಸ್ತರಿಗೆ ಸವಲತ್ತು

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನದ ವೇಳೆ ಮುಳುಗಡೆಯಾಗುವ ಸುಮಾರು 1 ಲಕ್ಷ ಎಕರೆ ಜಮೀನಿಗೆ ಆಕರ್ಷಕ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. “ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನೀಡಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು” ಎಂದು ಸಿಎಂ ಘೋಷಿಸಿದರು. ಇದಕ್ಕಾಗಿ ಪೂರಕ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು.

ತುಂಗಭದ್ರಾ ಗೇಟ್‌ಗಳ ಬದಲಾವಣೆ ಹಾಗೂ ಕಲ್ಯಾಣ ಕರ್ನಾಟಕ:

ತುಂಗಭದ್ರಾ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಶಿಥಿಲಗೊಂಡಿರುವ ಎಲ್ಲಾ ಗೇಟುಗಳನ್ನು ಜೂನ್ ತಿಂಗಳೊಳಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ವ್ಯಾಪ್ತಿಯಲ್ಲಿ 2026-27ನೇ ಸಾಲಿನಲ್ಲಿ ₹5,000 ಕೋಟಿ ವೆಚ್ಚದ ಯೋಜನೆಗಳನ್ನು ಜಾರಿಗೆ ತರಲಾಗುವುದು. ಈಗಾಗಲೇ ಪ್ರಸಕ್ತ ವರ್ಷ ₹4,000 ಕೋಟಿ ವ್ಯಯಿಸಲಾಗಿದ್ದು, ಬಾಕಿ ಅನುದಾನವನ್ನೂ ಶೀಘ್ರವೇ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸೋಶಿಯಲ್ ಮೀಡಿಯಾ ನಿರ್ಬಂಧ ಹಾಗೂ ಪ್ರವಾಸೋದ್ಯಮ:

ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ತಡೆಯಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆಯಿದ್ದರೂ, ಸೋಷಿಯಲ್ ಮೀಡಿಯಾ ಬಳಕೆಯನ್ನು ನಿರ್ಬಂಧಿಸುವ ಕುರಿತು ಶೀಘ್ರದಲ್ಲೇ ನೀತಿ-ನಿಯಮಗಳನ್ನು ರೂಪಿಸಲಾಗುವುದು ಎಂದು ಸಿಎಂ ತಿಳಿಸಿದರು. ಇದೇ ವೇಳೆ ಕರಾವಳಿ ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಅವರು, “ಬಿಜೆಪಿಯವರು ತಮ್ಮ ಅವಧಿಯಲ್ಲಿ ಏನನ್ನೂ ಮಾಡದೆ ಈಗ ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ” ಎಂದು ಟೀಕಿಸಿದರು.

ವಿತ್ತೀಯ ಶಿಸ್ತಿನ ಮಂತ್ರ:

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳು ಸಕಾಲಕ್ಕೆ ಬಂದಿದ್ದರೆ ಹಣಕಾಸಿನ ಯಾವುದೇ ಕೊರತೆ ಎದುರಾಗುತ್ತಿರಲಿಲ್ಲ. ಆದರೂ ಹಿಂದಿನ ಬಜೆಟ್‌ಗಳಂತೆಯೇ ಈ ವರ್ಷವೂ ರಾಜ್ಯ ಸರ್ಕಾರವು ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.


Share this with Friends

Related Post