Fri. Mar 6th, 2026

ವಿಐಎಸ್ಎಲ್ ಪುನಶ್ಚೇತನಕ್ಕೆ ದೃಢ ಸಂಕಲ್ಪ: ಕುಮಾರಸ್ವಾಮಿ ಜತೆ ರಾಘವೇಂದ್ರ ಚರ್ಚೆ

Share this with Friends

ನವದೆಹಲಿ:ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನ ಕಾರ್ಯ ಸಂಬಂಧ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಂಸದ ಬಿವೈ ರಾಘವೇಂದ್ರ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಶಿವಮೊಗ್ಗ ಸಂಸದ ರಾಘವೇಂದ್ರ ಪುನಶ್ಚೇತನ ಕಾರ್ಯ ಆರಂಭದ ಕುರಿತು ಸಮಾಲೋಚನೆ ನಡೆಸಿದರು. ಈಗಾಗಲೇ ವಿಐಎಸ್‌ಎಲ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ₹8,000 ರಿಂದ ₹10,000 ಕೋಟಿ ಹೂಡಿಕೆಯೊಂದಿಗೆ ಆಧುನೀಕರಣಗೊಳಿಸಲು ಯೋಜನೆ ಸಿದ್ಧಪಡಿಸಿದೆ. ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶಾಖಪಟ್ಟಣಂ ಮಾದರಿಯಲ್ಲಿ ಕಾರ್ಖಾನೆ ಪುನಶ್ಚೇತನಗೊಳಿಸಿ, ಉತ್ಕೃಷ್ಟ ದರ್ಜೆಯ ಉಕ್ಕು ಉತ್ಪಾದನೆಯ ಗುರಿ ಹೊಂದಿದ್ದು,ಈ ಸಂಬಂಧ ಜಿಲ್ಲೆಯ ಜನತೆಗೆ ಭರವಸೆಯನ್ನೂ ನೀಡಿದ್ದಾರೆ ಅಲ್ಲದೆ ಸಿರಿಗೆರೆ ಮಠದಿಂದ ಪುನಶ್ಚೇತನ ಕಾರ್ಯಕ್ಕೆ 5 ಕೋಟಿ ದೇಣಿಗೆಯ ವಾಗ್ದಾನವೂ ಸಿಕ್ಕಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಸಚಿವರು ಮಗ್ತು ಸಂಸದರ ನಡುವೆ ಸಮಾಲೋಚನೆ ನಡೆಯಿತು.ಹಳೆಯ ಯಂತ್ರೋಪಕರಣಗಳನ್ನು ಬದಲಾಯಿಸಿ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಐಎಸ್‌ಎಲ್ ಮರುನಿರ್ಮಾಣ. ಪುನಶ್ಚೇತನಕ್ಕಾಗಿ ವಿವರವಾದ ಯೋಜನಾ ವರದಿ, ಬಳ್ಳಾರಿ ಜಿಲ್ಲೆಯಲ್ಲಿ 140 ಹೆಕ್ಟೇರ್ ಗಣಿಗಳನ್ನು ಮಂಜೂರು ಮಾಡುವ ಮೂಲಕ ಕಚ್ಚಾ ವಸ್ತುಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ನಡೆಸಿರುವ ಪ್ರಯತ್ನದ ಕುರಿತು ಚರ್ಚೆ ನಡೆಸಲಾಯಿತು.

ಸಚಿವರ ಭೇಟಿ ಬಳಿಕ ಮಾತನಾಡಿದ ಸಂಸದ ಬಿವೈ ರಾಘವೇಂದ್ರ,ಇಂದು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಕುರಿತು ಮತ್ತೊಂದು ಮಹತ್ವದ ಸುತ್ತಿನ ಚರ್ಚೆ ನಡೆಸಲಾಯಿತು.  ಕಾರ್ಖಾನೆಯ ಪುನಶ್ಚೇತನ, ತಾಂತ್ರಿಕ ಆಧುನೀಕರಣ, ಉತ್ಪಾದನಾ ಸಾಮರ್ಥ್ಯ ವೃದ್ಧಿ ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ದಿಕ್ಕಿನಲ್ಲಿ ಸಾಧ್ಯವಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಯಿತು.  ಭದ್ರಾವತಿಯ ಕೈಗಾರಿಕಾ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕೂ, ವಿಐಎಸ್ಎಲ್ ಗೆ ದೀರ್ಘಕಾಲಿಕ ಹಾಗೂ ಸ್ಥಿರವಾದ ಭವಿಷ್ಯವನ್ನು ರೂಪಿಸುವುದಕ್ಕೂ ನಮ್ಮ ಬದ್ಧತೆ ಅಚಲವಾಗಿದೆ ಎಂದು ತಿಳಿಸಿದರು.

 


Share this with Friends

Related Post