ಬೆಂಗಳೂರು, ಏ.5: ಸಂಸದೆ ಸುಮಲತಾ ಅಂಬರೀಶ್ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ
ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಪಕ್ಷದ ಚುನಾವಣಾ ಉಸ್ತುವಾರಿ ರಾದಾಮೋಹನ್ ದಾಸ್, ಅದರವಿಪಕ್ಷ ನಾಯಕ ಆರ್.ಅಶೋಕ್,ಮಾಜಿ ಸಿ.ಎಂ.ಸದಾನಂದಗೌಡ,ಸಿ.ಟಿ.ರವಿ ಮತ್ತಿತರರು ಸುಮಲತಾ ಅವರನ್ನು ಬರಮಾಡಿಕೊಂಡರು.
ಈ ವೇಳೆ ಬಿಜೆಪಿ ಶಾಲು ಹಾಗೂ ಬಾವುಟವನ್ನು ವಿಜಯೇಂದ್ರ ಸುಮಲತಾ ಅವರಿಗೆ ನೀಡಿ ಸ್ವಾಗತ ಕೋರಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ನಾನು ಬಿಜೆಪಿಗೆ ಸೇರುತ್ತಿರುವ ಈ ದಿನ ಅತ್ಯಂತ ಸುದಿನ ಎಂದು ಬಣ್ಣಿಸಿದರು.
ನಾನು ಯಾವುದೇ ಶರತ್ತುಗಳಿಲ್ಲದೆ ಪ್ರಧಾನಿ ಮೋದಿಯವರ ನಾಯಕತ್ವ ಮೆಚ್ಚಿ ಖುಷಿಯಿಂದ ಬಿಜೆಪಿಗೆ ಸೇರಿದ್ದೇನೆ ಎಂದು ತಿಳಿಸಿದರು.
ಈಗ ಚುನಾವಣೆ ಕೇವಲ ಮಂಡ್ಯಕ್ಕಷ್ಟೇ ಅಲ್ಲಾ ಇಡೀ ದೇಶಕ್ಕೆ ನಡೆಯುತ್ತಿದೆ,ಹಾಗಾಗಿ ಪಕ್ಷದ ವರಿಷ್ಠರು ಯಾವ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುವಂತೆ ಹೇಳಿದರೂ ಅಲ್ಲಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ಸ್ಪೂರ್ತಿ ಎಂದು ಬಣ್ಣಿಸಿದ ಸುಮಲತಾ ಈ ಐದು ವರ್ಷಗಳಲ್ಲಿ ನಾನು ಅವರಿಂದ ತುಂಬಾ ಕಲಿತ್ತಿದ್ದೇನೆ.ಇನ್ನು ಮುಂದೆ ಪಕ್ಷ ಯಾವ ಕೆಲಸ ಹೇಳಿದರೂ ಮಾಡುತ್ತೇನೆ,ಮೋದಿಯವರ ಕೈ ಬಲಪಡಿಸುವುದೇ ನಮ್ಮ ಗುರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್,ರಾಕ್ ಲೈನ್ ವೆಂಕಟೇಶ್,ಮಾಜಿ ಸಂಸದ ಶಿವರಾಮೇಗೌಡ ಹಾಗೂ ಕೆಲವು ಸುಮಲತಾ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಗೊಂಡರು.