ಮಂಡ್ಯ,ಏ.3: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬಿಜೆಪಿ,ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಯವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದರು.
ಮಂಡ್ಯದಲ್ಲಿ ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ನಾನು ಸದ್ಯದಲ್ಲಿಯೇ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ. ನಾನು ಖಂಡಿತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಬಿಜೆಪಿಯ ನಾಯಕರುಗಳು ಹೇಳಿದಂತೆ ನಡೆಯುತ್ತೇನೆ ಎಂದು ತಿಳಿಸಿದರು.
ಇದುವರೆಗೆ ನನ್ನನ್ನು ಪ್ರೀತಿಸಿದ ಮಂಡ್ಯ ಜನತೆಗೆ ಮತ್ತು ನನ್ನ ಬೆಂಬಲಿಗರಿಗೆ ಅಭಿಮಾನಿಗಳಿಗೆ ಮತ್ತು ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಪಕ್ಷದಲ್ಲಿ ಇದ್ದರೂ ಮಂಡ್ಯ ಜನರ ಪ್ರೀತಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆ ಮುಂದೆಯೂ ಇಲ್ಲೇ ಇದ್ದು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಡಿ ಬಾಸ್ ದರ್ಶನ್ ಚುನಾವಣಾ ಪ್ರಚಾರಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ಒಂದು ವೇಳೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೆ ಖಂಡಿತ ದರ್ಶನ್ ಅವರು ಪ್ರಚಾರಕ್ಕೆ ಬರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಹಾಗಾಗಿ ಅವರು ಪ್ರಚಾರಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ನಾನು ಇದರಲ್ಲಿ ಬಲವಂತ ಮಾಡಲು ಸಾಧ್ಯವಿಲ್ಲ ಮತ್ತು ನಾನು ಏನನ್ನು ಹೇಳಲಾಗುವುದಿಲ್ಲ ಎಂದು ಉತ್ತರಿಸಿದರು.