ಕೋಲಾರ: ಸಿದ್ದರಾಮಯ್ಯ ಸರ್ಕಾರ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ವ್ಯವಸ್ಥೆ ಮಾಡಲಿದೆ. ಜಿಲ್ಲಾಸ್ಪತ್ರೆಗಳಿಗೆ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ಸದ್ಯದಲ್ಲಿಯೇ ನೇಮಕ ಮಾಡಲಿದ್ದೇವೆ. ತಾಲ್ಲೂಕು ಆಸ್ಪತ್ರೆ ಇನ್ನು ಮುಂದೆ ದಿನದ ಇಪ್ಪತ್ನಾಲ್ಕು ತಾಸು ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ನರಸಾಪುರದಲ್ಲಿ ₹12.5 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಶ್ರೀ ನರಸಿಂಹರಾಜ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ, ಡಯಾಲಿಸಿಸ್ ನೂತನ ಕಟ್ಟಡ, ಎಂಡೋಸ್ಕೋಪ್ ಮತ್ತು 2D ECho ಯಂತ್ರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು,ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಮಾತನಾಡುವವರ ಮಾತನ್ನು ನಂಬಬೇಡಿ. ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಹಾಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ವ್ಯವಸ್ಥೆ ಮಾಡಲಿದೆ. ತಾಲ್ಲೂಕು ಆಸ್ಪತ್ರೆ ಇನ್ನು ಮುಂದೆ ದಿನದ ಇಪ್ಪತ್ನಾಲ್ಕು ತಾಸು ಕಾರ್ಯ ನಿರ್ವಹಿಸಲಿದ್ದು, ಬಾಣಂತಿ ಸಾವನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. MRI, CT Scan ಎಲ್ಲ ಆಸ್ಪತ್ರೆಗಳಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಗೃಹ ಆರೋಗ್ಯ ಎನ್ನುವ ಮಹತ್ವದ ಕಾರ್ಯಕ್ರಮದ ಮೂಲಕ ಆರಂಭಿಕ ರೋಗ ಪತ್ತೆ ಮತ್ತು ಚಿಕಿತ್ಸೆ ನೀಡುತ್ತಿದ್ದೇವೆ. ಪ್ರಿವೆಂಟಿವ್ ಕೇರ್ ಬಹಳ ಮುಖ್ಯ. ಕೋಲಾರದಲ್ಲಿ ಈವರೆಗೆ 27.75 ಲಕ್ಷ ಜನರನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ ಸುಮಾರು 5 ಲಕ್ಷ ಜನರಲ್ಲಿ ವಿವಿಧ ಅಸಾಂಕ್ರಾಮಿಕ ರೋಗ ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ನರಸಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಂದುವರೆ ವರ್ಷದ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿದ್ದೆ. ಇಂದು ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಲು ಸಂತೋಷವಾಗುತ್ತಿದೆ. ಇದೊಂದು ಮಾದರಿ ಆರೋಗ್ಯ ಕೇಂದ್ರವಾಗಲಿದೆ. ಹೆದ್ದಾರಿಯ ಸಮೀಪವೇ ಇರುವುದರಿಂದ ಬಹುಪಯೋಗಿ ಎನಿಸಲಿದ್ದು, ಸುಸಜ್ಜಿತ ಶಸ್ತ್ರಚಿಕಿತ್ಸೆ ವ್ಯವಸ್ಥೆಯೂ ಸಹ ಇದೆ. ಒಟ್ಟು 12.5 ಕೊಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರು.
ಶ್ರೀ ನರಸಿಂಹರಾಜ ಆಸ್ಪತ್ರೆಯಲ್ಲಿ 16.5ಕೋಟಿ ರೂ ವೆಚ್ಚದಲ್ಲಿ ಐವತ್ತು ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣ ಆಗಿ, ಇಂದು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿದೆ. ಡಯಾಲಿಸಿಸ್ ಸಲುವಾಗಿ 20ಹಾಸಿಗೆ ಮೀಸಲಿಡಲಾಗಿದೆ. ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ವಿಶ್ರಾಂತಿ ಪಡೆಯಲು ಸಹ ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರ ಆರಂಭಿಸಿದೆ. ಕೋಲಾರದಲ್ಲಿ ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮ ಕೈಗೊಂಡಿದ್ದು, ಮುಳಬಾಗಿಲಿನಲ್ಲಿ 40ಕೋಟಿ ರೂ ವೆಚ್ಚದಲ್ಲಿ ನೂರು ಹಾಸಿಗೆ ಆಸ್ಪತ್ರೆ ಆಗಲಿದೆ. ರಹಮತ್ ನಗರ, ನ್ಯೂಗಲ್ ಬಂಡಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬರಲಿದೆ. ಕೆಜಿಎಫ್ ನಲ್ಲಿ 10ಕೋಟಿ ರೂ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕ್ಯಾಲನೂರು ಪಿಹೆಚ್ ಸಿ ಕಾಮಗಾರಿಗೆ ನಾನೇ ಭೂಮಿ ಪೂಜೆ ಮಾಡಿದ್ದೇನೆ. ಹೀಗೆ ಕೋಲಾರ ಜಿಲ್ಲೆಗೆ ಆರೋಗ್ಯ ಇಲಾಖೆಯು ಜನರ ಅನುಕೂಲಕ್ಕೆ ಅಗತ್ಯ ರೀತಯಲ್ಲಿ ಸ್ಪಂದಿಸುತ್ತಿದೆ. ಕೊಲಾರದಲ್ಲಿ ಉಸ್ತುವಾರಿ ಸಚಿವರಾದ ಭೈರತಿ ಸುರೇಶ್ ಹಾಗೂ ಶಾಸಕ ಕೊತ್ತೂರು ಮಂಜುನಾಥ ಬಹಳ ಶ್ರಮಪಟ್ಟು ಯೋಜನೆಗಳನ್ನು ವ್ಯವಸ್ಥಿಯವಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸದಾ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

