Sat. Nov 2nd, 2024

ವಿದ್ಯಾಧೀಶತೀರ್ಥ ಶ್ರೀಗಳಿಂದ ಸಹಸ್ರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ

Share this with Friends

ಮೈಸೂರು, ಜು.17: ಆಷಾಢ ಮಾಸದ ಪ್ರಥಮ ಏಕಾದಶಿ ಹಿನ್ನೆಲೆಯಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಸರಸ್ವತಿಪುರಂ ಶ್ರೀ ಕೃಷ್ಣಧಾಮದಲ್ಲಿ ಹಮ್ಮಿಕೊಳ್ಳಲಾಯಿತು.

ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಉಡುಪಿ ಪಲಿಮಾರು ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳುರವರು ಹಾಗೂ ಕಿರಿಯ ಶ್ರೀಗಳಾದ ವಿದ್ಯಾ ರಾಜೇಶ್ವರ ಪಾದಂಗಳವರು ಭಕ್ತರಿಗೆ ಶಂಖ, ಚಕ್ರಗಳ ಮುದ್ರಾಧಾರಣೆ ನೆರವೇರಿಸಿದರು.

ಬೆಳಗ್ಗಿನಿಂದಲೇ ಸಹಸ್ರಾರು ಭಕ್ತರು ಶ್ರೀಗಳಿಂದ ಮುದ್ರಾಧಾರಣೆ ಮಾಡಿಸಿಕೊಂಡರು.

ಈ ವೇಳೆ ಮಾತನಾಡಿದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು,ಆಷಾಢಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಉತ್ಥಾನದ್ವಾದಶಿಯ ತನಕ ಶ್ರೀಮನ್ನಾರಯಣನು ಯೋಗನಿದ್ರೆಯಲ್ಲಿ ತೊಡಗುತ್ತಾನೆ ಅನ್ನೋ ನಂಬಿಕೆ ಇದೆ‌ ಎಂದು ತಿಳಿಸಿದರು.

ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕವಾಗಲಿದೆ ಎಂದು ಹೇಳಿದರು.

ಚಾತುರ್ಮಾಸ್ಯ ಕೂರುವ ಮೊದಲು ಗೃಹಸ್ಥರು ಹಾಗೂ ಯತಿಗಳು ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಅನಾನುಕೂಲವಾದವರು ಏಕಾದಶಿ ದಿನದ ಹೊರತಾಗಿಯೂ ಮುದ್ರಾ ಧಾರಣೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಸುದರ್ಶನ ಹೋಮವನ್ನು ಮಾಡಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆಯ ಭಾಗ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಶ್ರೀಗಳು ಹೇಳಿದರು.

ಇದಕ್ಕೂ ಮೊದಲು ಮಠದಲ್ಲಿ
ಸುರೇಶ್ ಭಟ್ ಹಾಗೂ ಶ್ರೀಕಾಂತ್ ಆಚಾರ್ಯ ನೇತೃತ್ವದಲ್ಲಿ ಸುದರ್ಶನ ಹೋಮ ನೆರೆವೇರಿಸಲಾಯಿತು

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ರವಿಶಾಸ್ತ್ರಿ, ಪಿ. ಎಸ್ ಶೇಖರ್, ಕಾರ್ಯದರ್ಶಿಗಳಾದ ಕೆ. ವಿ ಶ್ರೀಧರ್ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಪಿ. ಜಿ. ಪ್ರವೀಣ್, ಉಪಾಧ್ಯಕ್ಷ ಗೋಪಾಲಕೃಷ್ಣನ್, ವಿಜಯ ವಿಠಲ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ವಾಸುದೇವ್ ಭಟ್‌ ಮತ್ತಿತರರು ಹಾಜರಿದ್ದರು.


Share this with Friends

Related Post