ಬೆಂಗಳೂರು:ಅಲ್ಲಿನ ಸಿಎಂ ಹೇಳಿದ ತಕ್ಷಣ ಇವರು ಓಡೋಡಿ ಕೆಲಸ ಮಾಡುತ್ತಿದ್ದಾರೆ ಅದರಂತೆ ಈಗ ಅಲ್ಲಿಯ ಸಿಎಂಗೆ ಹೇಳಿ ನಮ್ಮ ಕನ್ನಡ ಮಕ್ಕಳ ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎಂದು ಮಾಜಿ ಸಿಎಂ ಹಾಗು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಸರ್ಕಾರ ಅಲ್ಲಿನ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡುವ ಕಾಯ್ದೆ ತಂದಿದೆ. ಇದು ಕನ್ನಡ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ, ಕೇರಳ ರಾಜ್ಯದ ಆಜ್ಞೆಯಂತೆ ಕರ್ನಾಟಕ ದಲ್ಲಿ ಆಡಳಿತ ನಡೆಯುತ್ತಿದೆ . ಅಲ್ಲಿನ ಸಿಎಂ ಹೇಳಿದ ತಕ್ಷಣ ಇವರು ಓಡೋಡಿ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತವನ್ನು ದಾರ್ಷ್ಟ್ಯದಿಂದ ಮಾಡುತ್ತಿದ್ದಾರೆ. ವೇಣುಗೋಪಾಲ ಮೂಗಿಗೆ ನೆಗಡಿಯಾದರೆ ರಾಜ್ಯ ಸರಕಾರ ಸೀನುತ್ತದೆ. ಕಾಸರಗೋಡು ಕರ್ನಾಟಕದ ಭಾಗ ಎಂದು ಈಗಲೂ ನಾವು ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿದ್ದೇವೆ ಹಾಗಾಗಿ ಈಗ ಅಲ್ಲಿ ನಮ್ಮ ಕನ್ನಡ ಮಕ್ಕಳ ರಕ್ಷಣೆ ಮಾಡುವ ಕೆಲಸ ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ವಯನಾಡು ದುರಂತವಾದಾಗ ಅವರು ಹೇಳಿದರು ಎಂದು ಇವರು ಪರಿಹಾರವಾಗಿ ಹಣ ಕೊಟ್ಟಿದ್ದಾರೆ. ಅವರು ಹೇಳಿದ ತಕ್ಷಣ ಇಲ್ಲಿ ಮನೆ ಕಟ್ಟಿ ಕೊಡುತ್ತಿದ್ದಾರೆ ಹಾಗಾಗಿ ಅಲ್ಲಿಯ ಸಿಎಂಗೆ ಹೇಳಿ ನಮ್ಮ ಕನ್ನಡ ಮಕ್ಕಳ ರಕ್ಷಣೆ ಮಾಡುವ ಕೆಲಸ ಸಿಎಂ ಮಾಡಬೇಕು. ಕೇವಲ ಹೇಳಿಕೆ ಕೊಡುವುದಲ್ಲ ಕೆಲಸ ಮಾಡಿ ತೋರಿಸಬೇಕು ಎಂದು ಹೇಳಿದರು.
ಎಚ್ ಎಂ ಟಿ ಕಾರ್ಖಾನೆ ಮುಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಚ್ ಎಂಟಿಯನ್ನು ಹೊಸ ತಂತ್ರಜ್ಞಾನ ಬಳಸಿ ಉಳಿಸಬೇಕಿದೆ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮುಂದೆ ಬರಬೇಕಿದೆ ಎಂದು ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ಇದೆ. ಸಂವಿಧಾನದ 73 ನೇ ತಿದ್ದುಪಡಿಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಗಿದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ. ಸದಸ್ಯರು ಇದನ್ನು ಸರಿಯಾಗಿ ಓದಬೇಕು. ಗ್ರಾಮಿಣ ಜನರಿಗೆ ಹೆಚ್ಚಿನ ಸದಪಯೋಗ ನೀಡಲು ಸಕಾರಾತ್ಮವಾಗಿ ಈ ಯೋಜನೆ ಇದೆ. ಇದನ್ನು ಕಾಂಗ್ರೆಸ್ ಕೊರ್ಟ್ ನಲ್ಲಿ ಚಾಲೆಂಜ್ ಮಾಡಲಿ, ಅವರ ನಿಜ ಬಣ್ಣ ಬಯಲಾಗುತ್ತದೆ. ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಗಾಂಧಿಜಿ ಹೆಸರು ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೇ 80 ರಷ್ಟು ಯೋಜನೆಗಳು ಜವಾಹರಲಾಲ್ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿವೆ. ಇದು ಮೊದಲು ಜವಾಹರ ರೋಜಗಾರ ಯೋಜನೆ ಅಂತ ಇತ್ತು. ಚುನಾವಣೆ ಬಂದಾಗ ಗಾಂಧಿ ಹೆಸರನ್ನು ದುರುಪಯೊಗ ಪಡೆಸಿಕೊಂಡಿದ್ದಾರೆ. ಗಾಂಧಿಯನ್ನು ರಾಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಗಾಂಧಿಯಾವಾಗಲು ರಾಮನ ಹೆಸರು ಹೇಳುತ್ತಿದ್ದರು. ಈಗ ಈ ಯೋಜನೆಗೆ ರಾಮನ ಹೆಸರಿಟ್ಟಿರುವುದಕ್ಕೆ ಗಾಂಧಿ ಆತ್ಮ ಖುಷಿಯಾಗಿರುತ್ತದೆ ಎಂದು ಹೇಳಿದರು.

