ನವದೆಹಲಿ,ಮಾ.23: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮೋದಿ ಅವರು, ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಪ್ರಾರ್ಥಿಸಿದ್ದಾರೆ.
ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.
ದಾಳಿಗೆ ಸಂಬಂಧಪಟ್ಟಂತೆ ರಷ್ಯಾ ಅಧ್ಯಕ್ಷ ಪುಟಿನ್, ದಾಳಿಕೋರರು ತಕ್ಕ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ದಾಳಿಯ ಹೊಣೆ ಹೊತ್ತ ಐಸಿಸ್‍ಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಮಧ್ಯರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈವರೆಗೆ ಕನಿಷ್ಠ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.