ಸೂರತ್,ಏ.22: ಲೋಕಸಭಾ ಚುನಾವಣೆ ಮುಕ್ತಾಯವಾಗುವುದಕ್ಕೂ ಮುನ್ನವೇ ಬಿಜೆಪಿ ಮೊದಲ ಖಾತೆ ತೆರೆದಿದ್ದು ಪಕ್ಷದ ಕಾರ್ಯಕರ್ತ ರಲ್ಲಿ ಉತ್ಸಾಹ ಮೇರೆ ಮೀರಿದೆ.
ಇದೇನಪ್ಪಾ ಚುನಾವಣೆಗೂ ಮುನ್ನ ಗೆಲುವು ಅಂತೀರಾ,ಹೌದು ಇದು ನಿಜ.ಈ ಲೋಕಸಭಾ ಚುನಾವಣೆಯಲ್ಲಿ ಸೂರತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು.
ಅಲ್ಲದೇ ನಾಮಪತ್ರ ಸಲ್ಲಿಸಿದ್ದ ಉಳಿದ 8 ಮಂದಿ ಸ್ವತಂತ್ರ ಅಭ್ಯರ್ಥಿಗಳೂ ಕಣದಿಂದ ವಾಪಸಾಗಿದ್ದರು, ಹಾಗಾಗಿ ಮತದಾನ ನಡೆಯದೆಯೇ ಅನಾಯಾಸವಾಗಿ ಬಿಜೆಪಿ ಗೆಲಯವು ಸಾದಿಸಿದಂತಾಗಿದೆ.
ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ.ಆದರೆ ಇದನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಬೇಕಿದೆ.
ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಕ್ತಾರ ಅಂಕಿತ್ ಜೈನ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರದಲ್ಲಿನ ಸಹಿಗಳು ತಮ್ಮದಲ್ಲ ಎಂದು ಮೂವರು ಸೂಚಕರು ವಕೀಲರ ಮೂಲಕ ಚುನಾವಣಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿದ್ದ ಚುನಾವಣಾಧಿಕಾರಿಗಳು ಸಹಿಯನ್ನು ಪರಿಶೀಲಿಸಿದ್ದರು. ಪರಿಶೀಲಿಸಿದ ಬಳಿಕ ನಾಮಪತ್ರಗಳಲ್ಲಿನ ಸೂಚಕರ ಸಹಿಯಲ್ಲಿ ವ್ಯತ್ಯಾಸಗಳಿದ್ದುದು ದೃಢ ಪಟ್ಟ ಹಿನ್ನೆಲೆಯಲ್ಲಿ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೌರಭ್ ಪರ್ಧಿ ತಿಳಿಸಿದ್ದಾರೆ.
ತಮ್ಮ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಕಾರಣ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ,ಮುಂದೇನಾಗುವುದೊ ಕಾದು ನೋಡಬೇಕಿದೆ.