Mon. Dec 23rd, 2024

ಮತ್ತೆ ಪ್ರತಿಭಟನೆ ಹಾದಿ ಹಿಡಿಯಲು ಮುಂದಾದ ಅರಣ್ಯ ಪ್ರೇರಕರು

Share this with Friends

ಬೆಂಗಳೂರು,ಫೆ.28: ಗಿಡ ಮರ ಬೆಳೆಸಿ ಪರಿಸರ ಸಂರಕ್ಷಣೆ ಮಾಡುತ್ತಿರುವ ಅರಣ್ಯ ಪ್ರೇರಕರು ಮತ್ತೆ ಪ್ರತಿಭಟನೆ ಹಾದಿ ಹಿಡಿಯಲು ಮುಂದಾಗಿದ್ದಾರೆ.

ಪೂರ್ಣ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಪ್ರೇರಕರು ಫ್ರೀಡಂ ಪಾರ್ಕ್ ನಲ್ಲಿ 74 ದಿನಗಳ ಕಾಲ ಹೋರಾಟ ಮಾಡಿದ್ದರು.

ಆದರೆ ಬೇಡಿಕೆ ಈಡೇರದ ಕಾರಣ ಮತ್ತೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಅರಣ್ಯ ಪ್ರೇರಕರ ಒಕ್ಕೂಟದ ಅಧ್ಯಕ್ಷ ಶಿವಪ್ಪಗೌಡ ಎಚ್ಚರಿಸಿದ್ದಾರೆ.

ಅರಣ್ಯ ಪ್ರೇರಕರ ಮಾಸಿಕ ಗೌರವದನ ಹೆಚ್ಚಿಸುವ ಕುರಿತು ಸರ್ಕಾರ ಆದೇಶ ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಅನ್ನಲಿಲ್ಲ, 1984-85 ರಲ್ಲಿ ಅರೆಕಾಲಿಕ ಕೆಲಸ ಮಾಡಿದೆವು,1987ರಿಂದ ಪೂರ್ಣಾವಧಿ ಕೆಲಸ ಮಾಡಿಸಿಕೊಂಡಿದ್ದಾರೆ,ಆದರೂ ಇದುವರೆಗೆ ಅರಕಾಲಿಕ ವೇತನ ನೀಡಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ನಾವು ಬಡ ರೈತ ಕುಟುಂಬ ವರ್ಗದವರು ಸರಕಾರ ನಮಗೆ ಅನ್ಯಾಯ ಮಾಡಿದೆ, ಹೈಕೋರ್ಟ್ ನಲ್ಲಿ ಕೂಡ ನಮ್ಮ ಪರವೇ ಆದೇಶ ಬಂದಿದ್ದರೂ ಯಾವುದೇ ಸರ್ಕಾರ ನಮ್ಮ ಹಿತ ಕಾಯಲಿಲ್ಲ.

2022ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈಗ ಮುಖ್ಯ ಮಂತ್ರಿ ಆಗಿದ್ದಾರೆ.ಅಂದು ಅವರು ನಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ಕಾರ್ಯದರ್ಶಿಗೆ ಶಿಫಾರಸು ಪತ್ರ ಕೊಟ್ಟಿದ್ದರು.ಈಗ ಅವರೇ ಸಿಎಂ ಆದರೂ ನಮಗೆ ನ್ಯಾಯ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ,ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ನಮ್ಮ ಬೇಡಿಕೆಗಳ ಬಗ್ಗೆ ಮನವಿ ಪತ್ರ ಕೊಟ್ಟಿದ್ದೇವೆ,ಆದರೂ ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.

ಒಬ್ಬೊಬ್ಬ ಅರಣ್ಯ ಪ್ರೇರಕರು ಒಂದರಿಂದ ಒಂದೂವರೆ ಲಕ್ಷದ ವರೆಗೂ ಗಿಡ,ಮರಗಳನ್ನು ಬೆಳೆಸಿ ನಾಡಿನ ನೈರ್ಮಲ್ಯ ಕಾಪಾಡಿದ್ದಾರೆ ಆದರೆ ನಮ್ಮ ಸಮಸ್ಯೆಗಳನ್ನು ಸರ್ಕಾರ ಆಲಿಸಲೇ ಇಲ್ಲ.

ಪ್ರಾರಂಭದಲ್ಲಿ ಕೇವಲ 250 ರೂನಿಂದ ವೇತನ ಕೊಟ್ಟರು,ಫುಲ್ ಟೈಮ್ ಕೆಲಸವಿದ್ದಾಗಲೂ ಅಷ್ಟೇ ವೇತನ ಕೊಟ್ಟರು ನಂತರ 500,600ರೂ ಹೆಚ್ಚಿಸುತ್ತಾ ಬಂದರು ನಮಗೆ ಈಗ 11500 ರೂ ಬರುತ್ತಿದೆ,ಈಗಾಗಲೇ ಬಹಳಷ್ಟು ಮಂದಿ ನಿವೃತ್ತಿ ಯಾಗಿದ್ದಾರೆ ನಮಗೆ ಬದುಕು ಸಾಗಿಸಲು ಬಹಳ ತೊಂದರೆ ಆಗಿದೆ. ನಮಗೂ ಸರ್ಕಾರಿ ನೌಕರರಂತೆ ಎಲ್ಲಾ ಸೌಲಭ್ಯ ಕೊಡಬೇಕು,ನಮ್ಮನ್ನು ಖಾಯಂ ಮಾಡಬೇಕು ನಾವು ದುಡಿದ ಹಣವನ್ನು ನಮಗೆ ಕೊಡಬೇಕೆಂದು ನಮಗೂ ಸರಿಯಾದ ವೇತನ ಕೊಡಬೇಕೆಂದು ಶಿವಪ್ಪ ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಖಚಿತ ಎಂದು ಅವರು ಎಚ್ಚರಿಸಿದ್ದಾರೆ.


Share this with Friends

Related Post