Fri. Mar 6th, 2026

ರೈತರ ಹಿತ ಕಾಯಲು ರಾಜ್ಯಕ್ಕೆ ಕೇಂದ್ರದ ಸಹಕಾರವೂ ಬೇಕು: ಪ್ರಿಯಾಂಕ್ ಖರ್ಗೆ

Share this with Friends

ಬೆಂಗಳೂರು: ನಾಡಿನ ರೈತಾಪಿ ಜನರ ಹಿತ ಕಾಯುವುದನ್ನು ನಮ್ಮ ಸರ್ಕಾರವು ಆದ್ಯತೆಯಾಗಿ ಪರಿಗಣಿಸಿದೆ. ರೈತರ ಕಷ್ಟ ನಷ್ಟಗಳನ್ನು ನಿವಾರಿಸುವ ನಮ್ಮ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು,ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಹಲವು ವಿಷಯಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದಾರೆ.ಅವುಗಳಲ್ಲಿ ಪ್ರಮುಖ 5 ಅಂಶಗಳ ಕುರಿತು ಕೇಂದ್ರ ಸರ್ಕಾರವು ತಕ್ಷಣವೇ ಕ್ರಮ ವಹಿಸಿದಲ್ಲಿ ರಾಜ್ಯದ ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಯುವ ರೈತರ ಬದುಕಿಗೆ ಬಹುದೊಡ್ಡ ನಿರಾಳತೆಯನ್ನು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಐದು ಅಂಶಗಳು:

1. NAFED, FCI ಮತ್ತು NCCF ಗೆ ತಕ್ಷಣ ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಮತ್ತು ಹೆಸರುಕಾಳು ಖರೀದಿ ಆರಂಭಿಸಲು ನಿರ್ದೇಶನ ನೀಡಬೇಕು.

2. ಎಥೆನಾಲ್ ಪೂರೈಕೆಯ ಇಡಿ ವ್ಯವಸ್ಥೆಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಬೇಕು.

3. ಕರ್ನಾಟಕಕ್ಕೆ ಎಥೆನಾಲ್‌ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಬೇಕು.

4. ದೇಶಿಯ ಮೆಕ್ಕೆಜೋಳ ಉತ್ಪಾದಕರಿಗೆ ಬೆಲೆ ಕುಸಿತದ ಹೊಡೆತ ನೀಡಿರುವ ವಿದೇಶಿ ಮೆಕ್ಕೆಜೋಳ ಆಮದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.

5. ಹೆಸರುಕಾಳು ಖರೀದಿಗೆ ಗುಣಮಟ್ಟದ ನಿಯಮಗಳಲ್ಲಿ ಸಡಿಲಿಕೆ ಮಾಡಬೇಕು, ಇದರಿಂದ ರೈತರು ತಮ್ಮ ನಿಯಂತ್ರಣದಲ್ಲಿ ಇಲ್ಲದ ಹವಾಮಾನ ವೈಪರಿತ್ಯಗಳು ಉಂಟುಮಾಡುವ ನಷ್ಟವನ್ನು ತಪ್ಪಿಸಿಕೊಳ್ಳಬಹುದಾಗಿದೆ.


Share this with Friends

Related Post