Fri. Mar 6th, 2026

ರಾಜ್ಯದ ಆಡಳಿತ ಹದಗೆಟ್ಟು ಹೋಗಿದೆ, ಇನ್ನಾದರೂ ಜನರು ಆಲೋಚನೆ ಮಾಡಬೇಕು:ಕುಮಾರಸ್ವಾಮಿ

Share this with Friends

ಬೆಂಗಳೂರು: ಜಗತ್ತಿಗೆ ಸ್ಪರ್ಧೆ ನೀಡುತ್ತಿದ್ದ ಬೆಂಗಳೂರಿನ ಮೂಲಸೌಕರ್ಯ ಹಾಳಾಗಿದೆ.ರಾಜ್ಯದಲ್ಲಿ ಹುಡುಗಾಟಿಕೆ ರಾಜಕೀಯ ನಡೆಯುತ್ತಿದೆ,ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಾ ಅಧಃಪತನಕ್ಕೆ ಹೋಗುತ್ತಿದೆ ಇನ್ನಾದರೂ ಜನತೆ ಯೋಚನೆ ಮಾಡಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ, ಅಟಲ್ ಪುರಸ್ಕಾರ ಪ್ರದಾನ ಹಾಗೂ ಸುಶಾಸನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಿನ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಸಂಪೂರ್ಣವಾಗಿ ಮಾಡಿದೆ. ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ ಕರ್ನಾಟಕ, ಇವತ್ತು ಈ ರಾಜ್ಯಕ್ಕೆ ಏನಾಗಿದೆ? ಒಳ್ಳೆಯ ರಾಜ್ಯದಲ್ಲಿ ಹುಡುಗಾಟಿಕೆ ರಾಜಕೀಯ ನಡೆಯುತ್ತಿದೆ. ಆರೋಗ್ಯ ಶಿಕ್ಷಣ, ಕೃಷಿ, ಕಂದಾಯ ಸೇರಿ ಎಲ್ಲಾ ಇಲಾಖೆಗಳ ಆಡಳಿತ ಹದಗೆಟ್ಟು ಹೋಗಿದೆ. ಇನ್ನಾದರೂ ಜನರು ಆಲೋಚನೆ ಮಾಡಬೇಕಿದೆ ಎಂದರು.

ಐಟಿ ಬಿಟಿ ರಾಜಧಾನಿ, ಶಿಕ್ಷಣ ತಂತ್ರಜ್ಞಾನದ ಅವಾಸಸ್ಥಾನವಾಗಿದ್ದ ಬೆಂಗಳೂರು ನಗರದ ಮೂಲಸೌಕರ್ಯ ಪೂರ್ಣವಾಗಿ ಹಾಳಾಗಿದೆ. ಯಾರಾದರೂ ಪ್ರಾಜ್ಞರು ಉತ್ತಮ ಸಲಹೆ ಕೊಟ್ಟರೆ ಅದನ್ನು ಸ್ವೀಕಾರ ಮಾಡುವ ಮನಸ್ಥಿತಿ ಈ ಸರಕಾರಕ್ಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆಯೇ ಕೆಟ್ಟದಾಗಿ ಹರಿಯಬಿಡುವ ಸಂಸ್ಕೃತಿ ಇವರದು.ಆಡಳಿತ ಎಂದರೆ ಕರ್ನಾಟಕ ಎನ್ನುವ ದಿನಗಳು ಮತ್ತೆ ಬರಬೇಕು. ಹಿಂದಿನ ಉತ್ತಮ ಆಡಳಿತ ಮತ್ತೆ ಬರಬೇಕು. ಈ ಸರಕಾರದ ಕೆಟ್ಟ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಈಗಲಾದರೂ ಆಲೋಚನೆ ಮಾಡಬೇಕು ಎಂದು ಈ ವೇದಿಕೆಯ ಮೂಲಕ ನಾನು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ರಾಜ್ಯಕ್ಕೆ ಎಲ್ಲಾ ರೀತಿಯ ಶಕ್ತಿ ಇದೆ. ಜಗತ್ತಿನ ಜತೆ ಸ್ಪರ್ಧಾತ್ಮಕವಾಗಿ ಮುನ್ನಡೆಯುವ ಸಾಮರ್ಥ್ಯವೂ ಇದೆ. ಜಗತ್ತು ಅಭಿವೃದ್ಧಿಯತ್ತ ನಾಗಾಲೋಟದಲ್ಲಿ ಸಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಅಷ್ಟೇ ವೇಗದಲ್ಲಿ ಮುನ್ನಡೆಯುತ್ತಿತ್ತು. ಮೂರನೇ ದೈತ್ಯ ಆರ್ಥಿಕ ಶಕ್ತಿ ಆಗುವುದಕ್ಕೆ ಭಾರತ ದಾಪುಗಾಲು ಇಡುತ್ತಿದೆ. ಹೀಗಿದ್ದರೂ ಕರ್ನಾಟಕ ಯಾವ ದಿಕ್ಕಿಗೆ ಹೋಗುತ್ತಿದೆ. ಹಿಮ್ಮುಖವಾಗಿ ಚಲಿಸುತ್ತಾ ಅಧಃಪತನಕ್ಕೆ ಹೋಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

2006ರಲ್ಲಿ ನಾನು ಬಿಜೆಪಿ ಜತೆ ಸೇರಿ ಮೈತ್ರಿ ಸರಕಾರ ಮಾಡಿದ್ದೆ. ಅಂದು ವಾಜಪೇಯಿ ಅವರ ಸುಶಾಸನ ಪರಿಕಲ್ಪನೆಗೆ ಗೌರವ ತರುವ ರೀತಿಯಲ್ಲಿ ಆಡಳಿತ ಮಾಡಿದ್ದೆವು. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದು ಕೇಂದ್ರ ಸಚಿವರು ಹೇಳಿದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಮಾಜದಲ್ಲಿ ನೆಮ್ಮದಿ ಇಲ್ಲ. ಕುಟುಂಬಗಳಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಆತಂಕ ಆಗುತ್ತದೆ. ಟೆಕ್ನಾಲಜಿ ಬೆಳೆಯುತ್ತಿದೆ, ಆರ್ಥಿಕವಾಗಿ ಶಕ್ತಿವಂತರಾಗುತ್ತಿದ್ದೇವೆ. ಬೆಳಗ್ಗೆ ಎದ್ದು ಟೀವಿ ಹಾಕುವುದಕ್ಕೆ ಭಯವಾಗುತ್ತದೆ. ಯಾರಿಗೂ ನೆಮ್ಮದಿ ಇಲ್ಲ. ನಾನು ಇದೇ ಕಾರಣಕ್ಕೆ ಶಾಲಾ ಹಂತದಲ್ಲಿಯೇ ಭಗವದ್ಗೀತೆ ಬೋಧನೆಯ ಮಾಡಬೇಕು ಎಂದು ಹೇಳಿದೆ. ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋವಿಂದನ್ ರಂಗರಾಜನ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಎಸ್. ಚಂದ್ರಶೇಖರ ಶೆಟ್ಟಿ, ಬೇಸ್ ಮತ್ತು ಪ್ರಯೋಗ ಸಂಸ್ಥೆಗಳ ಸ್ಥಾಪಕರಾದ ಡಾ. ಹೆಚ್.ಎಸ್. ನಾಗರಾಜು ಅವರಿಗೆ 2025ನೇ ಸಾಲಿನ ಅಟಲ್ ಪುರಸ್ಕಾರ ಪ್ರದಾನ ಮಾಡಲಾಯಿತು.


Share this with Friends

Related Post