ಬೆಂಗಳೂರು,ಫೆ.29:ಆರ್.ಎಸ್.ಎಸ್.
ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ,ಯಾರಿಂದಲೂ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು
ಸ್ವಾತಂತ್ರ್ಯ ಹೋರಾಟ ತೀವ್ರವಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ, ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಸಿಎಂ ಹೇಳಿದರು.
ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಕೇವಲ ಬಾಯಿ ಮಾತು ಇಂಥವರು ದೇಶವನ್ನು ಆಳಲು ಲಾಯಕ್ಕೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂದು ವಿಶ್ವಾಸದಿಂದ ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಬಿಜೆಪಿಯವರು ಗದ್ದಲ ಎಬ್ಬಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಸಿಎಂ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚರ್ಚೆಯಲ್ಲಿ ಶೇ. 30 ರಷ್ಟು ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ, ಜೆಡಿಎಸ್ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ ಎಸ್ ಅನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.