Fri. Mar 6th, 2026

ನವೆಂಬರ್ ನಲ್ಲಿ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ: ಕುಮಾರಸ್ವಾಮಿ

Share this with Friends

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಳ ಚನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ,ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ ನವೆಂಬರ್ ನಲ್ಲಿ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.ಯಾವ ಬದಲಾವಣೆಯೂ ಅಗುವುದಿಲ್ಲ ಎಂದು ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಕುರಿತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹಾಗೂ ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆಯಾಗುತ್ತಿದೆ ಆದರೆ ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ಆಗಲ್ಲ ವಾಂತಿಯೂ ಆಗಲ್ಲ. ನನಗೆ ಸಿದ್ದರಾಮಯ್ಯನವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ ಯಾವ ಬದಲಾವಣೆಯೂ ಅಗುವುದಿಲ್ಲ ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು? ಅದೇನಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ ಎಂದು ಸಿಎಂ ಸ್ಥಾನದ ನಿರೀಕ್ಷೆಯಲ್ಲಿರುವ ಡಿಸಿಎಂ ನಿರೀಕ್ಷೆ ಕುರಿತು ವ್ಯಂಗ್ಯವಾಡಿದರು.

2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. 20, 10 ವರ್ಷ ನಾವೇ ಎಂದು ಹೇಳಿದವರು ಏನಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. 2028ಕ್ಕೆ ಏನೇನಾಗುತ್ತೊ ಯಾರಿಗೆ ಗೊತ್ತು ಬಿಡಿ ಎಂದು ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಮೈಸೂರು ನಗರವನ್ನು ಗ್ರೇಟರ್ ಮೈಸೂರು ಮಾಡುತ್ತಾರೆ ಎಂದು ಹೇಳಿದ್ದಾರೆ, ಇದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿ ಮಾತ್ರ. ಡಿಕೆ ಶಿವಕುಮಾರ್ ಮೇಲಿನ ಪೈಪೋಟಿಗಾಗಿ ಸಿದ್ದರಾಮಯ್ಯ ಅವರು ಗ್ರೇಟರ್ ಮೈಸೂರು ಘೋಷಣೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಗ್ರೇಟರ್ ಬೆಂಗಳೂರು ಘೋಷಣೆ ಮಾಡಿರುವುದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ  ಗ್ರೇಟರ್ ಮೈಸೂರು ಎನ್ನುತ್ತಿದ್ದಾರೆ. ಯಾವ ಗ್ರೇಟರ್ ಕೂಡಾ ಆಗುವುದಿಲ್ಲ. ಇವರು ಸುಮ್ಮನೆ ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದರು.


Share this with Friends

Related Post