ಬೆಂಗಳೂರು:1,800 ಕೋಟಿ ರೂ. ಖರ್ಚು ಮಾಡಿ ರಸ್ತೆಗುಂಡಿ ಮುಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ ಆದರೆ ಮುಚ್ಚಿಸಿದ ಗುಂಡಿಗಳು ಮತ್ತೆ ಸೃಷ್ಟಿಯಾಗಿದೆ.ಜಿಬಿಎ ಬಂದ ನಂತರ ಕಸ ವಿಲೇವಾರಿಯಾಗುತ್ತಿಲ್ಲ ಇದು ದುಬಾರಿ ಬೆಂಗಳೂರು ಆಗಿ ಮಾರ್ಪಾಡಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಗುಂಡಿ ಬಿದ್ದ ರಸ್ತೆಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆಯಲು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡರು. ರಾಜ್ಯ ಸರ್ಕಾರವು ಕೂಡಲೇ ಕಾರ್ಯಪ್ರವೃತ್ತವಾಗಿ ರಸ್ತೆಗುಂಡಿಗಳನ್ನು ಮುಚ್ಚಬೇಕು, ಅಪಘಾತಕ್ಕೆ ಕಾರಣವಾಗುವ ಹಾಗೂ ಜನರ ಜೀವ ಹಾನಿಗೆ ಎಡೆಕೊಡುವ ರಸ್ತೆ ಗುಂಡಿಗಳ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆ ನಿಲ್ಲಿಸಬೇಕು ಎಂದು ಪ್ರತಿಭಟನಾನಿರತ ನಾಯಕರು ಆಗ್ರಹಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಮಾತನಾಡಿದ ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಜನರಿಗೆ ತೆರಿಗೆ ಹಾಕುತ್ತದೆ. ಆದರೆ ರಸ್ತೆಗುಂಡಿ ಮುಚ್ಚಿಸಲ್ಲ, ಕಸ ವಿಲೇವಾರಿ ಮಾಡಲ್ಲ ,ಕೇವಲ ಗ್ಯಾರಂಟಿಯ ಹೆಸರು ಹೇಳಿಕೊಂಡ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಅನುದಾನ ನೀಡಿಲ್ಲ. ಬೆಂಗಳೂರಿನ ಜನರಿಗೆ ಈ ಸರ್ಕಾರದ ಕಾರ್ಯವೈಖರಿ ದೊಡ್ಡ ಶಾಪವಾಗಿದೆ. ರಸ್ತೆ ಗುಂಡಿ ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರ ಗಡುವು ಕೇಳಿದ್ದು, ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿ ಎನ್ನುತ್ತಿದ್ದಾರೆ. ಈ ಸರ್ಕಾರದ ನಡುವೆ ಹೊಂದಾಣಿಕೆಯೇ ಇಲ್ಲ. ಇದು ಜವಾಬ್ದಾರಿ ಇಲ್ಲದ ಮಾತುಗಳು ಎಂದರು.
ರಸ್ತೆಗುಂಡಿಯಿಂದಾಗಿ ಜನರು ಸಾಯುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕಿತ್ತು. ರಸ್ತೆಗಳನ್ನು ದುರಸ್ತಿ ಮಾಡಿಲ್ಲವೆಂದರೆ ಈ ಸರ್ಕಾರ ಸತ್ತುಹೋಗಿದೆ ಎಂದೇ ಹೇಳಬೇಕು. ಜಲಮಂಡಳಿಯವರು ರಸ್ತೆ ಅಗೆದರೆ ನಂತರ ಅದರಲ್ಲೇ ಬೈಕ್ ಹೋಗಬಹುದು. ಇಂತಹ ಸುರಂಗ ಮಾರ್ಗಗಳನ್ನು ಇವರು ತೋಡುತ್ತಿದ್ದಾರೆ. ಪಣತ್ತೂರಿನಲ್ಲೇ ಇದೇ ರೀತಿಯಾಗಿದೆ. ಪಾದಚಾರಿ ಮಾರ್ಗಗಳಲ್ಲೂ ಓಡಾಡಲು ಆಗುತ್ತಿಲ್ಲ. ಬೆಂಗಳೂರನ್ನು ದುಬಾರಿ ಮಾಡಿದ್ದಾರೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದಾಗಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಒಂದು ಮನೆಗೆ 720 ರೂ. ಕಸ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಿಗೆ 1800 ರೂ. ಇದ್ದ ಶುಲ್ಕವನ್ನು 17,800 ರೂ. ಮಾಡಿದ್ದಾರೆ. ಆಸ್ಪತ್ರೆಗಳಿಗೆ 9600 ರೂ. ಶುಲ್ಕವಿದ್ದು ಅದನ್ನು 2 ಲಕ್ಷ ರೂ. ಮಾಡಿದ್ದಾರೆ. ಹೀಗೆ ಕಸಕ್ಕಾಗಿ ಕೋಟ್ಯಂತರ ಶುಲ್ಕ ಸಂಗ್ರಹಿಸಿದರೂ ಕಸದ ಮುಕ್ತ ಆಗಿಲ್ಲ. ಇದು ಗಾರ್ಬೇಜ್ ಸಿಟಿಯಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶದ್ರೋಹಿಗಳಿಗೆ ಅನುಕೂಲವಾಗುತ್ತದೆ. ಜೈಲುಗಳಲ್ಲಿ ಮೊಬೈಲ್, ಸಿಮ್ ಎಲ್ಲವೂ ದೊರೆಯುತ್ತದೆ. ಪರಪ್ಪನ ಅಗ್ರಹಾರ ಉಗ್ರರ ಸ್ವರ್ಗವಾಗಿದೆ ಎಂದರು.

