ಬೆಂಗಳೂರು:ಆರ್.ಅಶೋಕ್ ಅವರು ಇಂದು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಚ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿ ಆರೋಪದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು 2019ರ ನವೆಂಬರ್‌ನಲ್ಲಿ ಕೊಟ್ಟ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಬಿ.ವೀರಪ್ಪನವರು ಇಂದು ಮಾತನಾಡಿದ್ದಾರೆ. ಅವರು ವರದಿ ನೀಡುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು ಎಂದು ಟಕ್ಕರ್ ನೀಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ, ಎರಡೇ. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಐಸಿಯು ಖರೀದಿ ಎನ್ನದೆ ಎಲ್ಲದರಲ್ಲಿಯೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು. ಪ್ರತಿ ಇಲಾಖೆಯಲ್ಲಿ ಕನಿಷ್ಠ 40% ಕಮಿಷನ್ ಚಾಲ್ತಿಯಲ್ಲಿ ಇತ್ತು. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಅಂದಿನ ಸಚಿವ ಈಶ್ವರಪ್ಪನವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ನೀರಾವರಿ ಇಲಾಖೆಯ ಭದ್ರಾ ಮೇಲ್ದಂಡೆ ಹಾಗೂ ಕಾವೇರಿ ನೀರಾವರಿ ನಿಗಮದಲ್ಲಿ ಭಾರೀ ಅಕ್ರಮ ನಡೆದಿದ್ದು, ಸುಮಾರು ₹20,000 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಇಂದಿನ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ವಿರುದ್ಧ ನೇರಾನೇರ ಆರೋಪ ಮಾಡಿದ್ದರು. ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ಮಾಡಿ ನಿಮ್ಮ ಹಲವು ಬಂಧು ಮಿತ್ರರು ಜೈಲು ಸೇರಿ ಬಂದಿದ್ದಾರೆ. ಇವೆಲ್ಲಾ ಮರೆತು ಹೋಯಿತೇ? ಹೀಗೆ ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು ಎಂದಿದ್ದಾರೆ.
ಇಂದು “ನ ಖಾವೂಂಗಾ, ನ ಖಾನೆದೂಂಗ” ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿದೆ. ಇದಕ್ಕೆ ಟ್ರಾನ್ಸ್‌ಪರೆಸಿ ಇಂಟರ್ನ್ಯಾಷನಲ್ ನವರು ಬಿಡುಗಡೆ ಮಾಡಿರುವ ಜಾಗತಿಕ ಭ್ರಷ್ಟಾಚಾರಯುಕ್ತ ದೇಶಗಳ ಪಟ್ಟಿಯಲ್ಲಿ ಭಾರತ 96ನೇ ಸ್ಥಾನದಲ್ಲಿ ಇರುವುದು ಸಾಕ್ಷಿ. ಮೊದಲು ಆರ್.ಅಶೋಕ್ ಅವರು ತಮ್ಮ ಪ್ರಧಾನ ಸೇವಕರ ಬಳಿ ಭಾರತದ ಈ ದಯನೀಯ ಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಯನ್ನೆತ್ತಲಿ ಎಂದಿದ್ದಾರೆ.
ನ್ಯಾ. ಬಿ.ವೀರಪ್ಪನವರ ಮಾತುಗಳನ್ನು ನಮ್ಮ ಸರ್ಕಾರಕ್ಕೆ ಅನ್ವಯಿಸಿ ಹೇಳುವ ಆರ್.ಅಶೋಕ್ ಅವರ ಮತಿಗೇಡಿತನಕ್ಕೆ ಏನೆನ್ನಬೇಕು? ನಮ್ಮ ಸರ್ಕಾರದಲ್ಲಿ ನೇಮಕಾತಿಯಿಂದ ಹಿಡಿದು ವರ್ಗಾವಣೆಯ ವರೆಗೆ ಎಲ್ಲವನ್ನೂ ಪಾರದರ್ಶಕವಾಗಿಸುವ, ಯಾವುದೇ ರೀತಿಯ ಹಣ, ಅಧಿಕಾರದ ದುರ್ಬಳಕೆಯಾಗದಂತೆ ತಡೆಯುವ ಪ್ರಯತ್ನ ಜಾರಿಯಲ್ಲಿದೆ ಎಂದಿದ್ದಾರೆ.

