ಬೆಂಗಳೂರು:ಅಬಕಾರಿ ಹಗರಣ ಪ್ರಕರಣ ಸಂಬಂಧ ಅಬಕಾರಿ ಸಚಿವ ಆರ್.ಬಿ ತಿಮ್ಮಾಪು ವಿರುದ್ಧ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದ್ದು, ಸದನದಲ್ಲಿ ಆರಂಭಿಸಿರುವ ಹೋರಾಟವನ್ನು ಸಚಿವರ ರಾಜೀನಾಮೆವರೆಗೂ ನಿಲ್ಲಿಸುವುದಿಲ್ಲ“ಜನತಾ ನ್ಯಾಯಾಲಯ”ದ ಮುಂದೆ ಈ ಹಗರಣವನ್ನು ಕೊಂಡೊಯ್ಯಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣವನ್ನು ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಸಚಿವ ತಿಮ್ಮಾಪುರ ರಾಜೀನಾಮೆ ಮತ್ತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದ್ದೆವು. ಆದರೆ ಹೈಕಮಾಂಡ್ ಹಾಗೂ ಸಿಎಂ ಆದಿಯಾಗಿ ಎಲ್ಲರೂ ಸೇರಿಕೊಂಡು ಲೂಟಿ ಮಾಡಿರುವುದರಿಂದ ಕಳಂಕಿತ ಸಚಿವರ ಬೆಂಬಲಕ್ಕೆ ಇಡೀ ಸಚಿವ ಸಂಪುಟವೇ ನಿಂತುಕೊಂಡಿತ್ತು. ಇದು ರಾಜ್ಯದ ಇತಿಹಾಸದಲ್ಲಿ ಹಿಂದೆ ಎಂದೆಂದೂ ನಡೆದಿರಲಿಲ್ಲ. ಇಲ್ಲಿ ಲೂಟಿ ಮಾಡಿದ ಹಣವನ್ನು ನೆರೆ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದರು.
ಆರೋಪಕ್ಕೆ ಒಂದು ಆಧಾರ ನೀಡಿದರೂ ರಾಜೀನಾಮೆ ನೀಡುವುದಾಗಿ ಸಚಿವ ತಿಮ್ಮಾಪುರ ಹೇಳಿದ್ದರು. ಒಂದಲ್ಲಾ, ಎರಡಲ್ಲಾ ಐದಕ್ಕೂ ಹೆಚ್ಚು ಸಾಕ್ಷ್ಯ ನೀಡಲಾಯಿತು. ಲಂಚ ಸ್ವೀಕಾರಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಮೂರು ಆಡಿಯೋ ಸಂಭಾಷಣೆ, ಎರಡು ಲೋಕಾಯುಕ್ತ ದೂರು, ರಾಜ್ಯಪಾಲರಿಗೆ ನೀಡಿದ್ದ ಒಂದು ದೂರು, ಲೋಕಾಯುಕ್ತರಿಗೆ ಸಿಕ್ಕಿಬಿದ್ದಿರುವ ನಿಂಗಪ್ಪ ಎಂಬಾತ ನೀಡಿದ್ದ ಸ್ವ ಇಚ್ಚಾ ಹೇಳಿಕೆಯಂತಹ ಗಂಭೀರ ಸಾಕ್ಷ್ಯ ನೀಡಿ ಮನವರಿಕೆ ಮಾಡಿಕೊಡಲಾಯಿತು. ಸಂವೇದನೆ ಇಲ್ಲದ ಈ ಸರ್ಕಾರ ಯಾವುದಕ್ಕೂ ಮಣಿಯಲಿಲ್ಲ ಎಂದು ಲೇವಡಿ ಮಾಡಿದರು.
ಅಧಿವೇಶನದಲ್ಲಿ ಆರಂಭಿಸಿರುವ ಈ ಹೋರಾಟ ನಿಲ್ಲುವುದಿಲ್ಲ. ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ “ಜನತಾ ನ್ಯಾಯಾಲಯ”ದ ಮುಂದೆ ಹಗರಣವನ್ನು ಕೊಂಡೊಯ್ಯಲಾಗುವುದು. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಆಲೋಚನೆ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪ್ರಮುಖ ಸಾಕ್ಷ್ಯಗಳು ಸಿಗುವ ಸೂಚನೆಗಳಿವೆ. ಅವುಗಳ ಸಮೇತ ಸಾರ್ವಜನಿಕರ ಮುಂದೆ ಈ ಸರ್ಕಾರದ ಬಣ್ಣ ಬಯಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

