Sun. Mar 8th, 2026

 “ನನಗೆ ಮರುಜನ್ಮ ಕೊಟ್ಟಿದ್ದೇ ಈ ಆಸ್ಪತ್ರೆ!”: ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ್ರಾ ಜೂನಿಯರ್ ಎನ್‌ಟಿಆರ್?

Share this with Friends

ಬೆಂಗಳೂರು: ಟಾಲಿವುಡ್‌ನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ (Jr NTR) ಭಾನುವಾರ ಬೆಂಗಳೂರಿನ ವಿವಿ ಪುರಂನಲ್ಲಿರುವ ಕೆ.ಐ.ಎಂ.ಎಸ್ (KIMS) ಆಸ್ಪತ್ರೆಯ ಸುಸಜ್ಜಿತ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಅಚ್ಚಗನ್ನಡದಲ್ಲಿ ಮಾತನಾಡಿದ ಅವರು, ಕನ್ನಡಿಗರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.

ಭಾವನಾತ್ಮಕ ಸಂಬಂಧ:

ವೇದಿಕೆ ಮೇಲೆ ಮೈಕ್ ಹಿಡಿಯುತ್ತಲೇ ಕನ್ನಡದಲ್ಲೇ ಮಾತು ಆರಂಭಿಸಿದ ತಾರಕ್, “ನನ್ನ ತಾಯಿ ಕುಂದಾಪುರದವರು. ಹಾಗಾಗಿ ಕರ್ನಾಟಕಕ್ಕೆ ಬರುವುದು ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಜನರ ಪ್ರೀತಿ ನನಗೆ ಯಾವಾಗಲೂ ವಿಶೇಷ” ಎಂದು ಹೇಳುವ ಮೂಲಕ ಅಭಿಮಾನಿಗಳ ಮನಗೆದ್ದರು.

ಇತಿಹಾಸ ಮರುಕಳಿಸಿದ ಕ್ಷಣ:

1983ರಲ್ಲಿ ಇದೇ ಕಾಲೇಜಿಗೆ ಎನ್‌ಟಿಆರ್ ಅವರ ತಾತ, ದಿವಂಗತ ಎನ್.ಟಿ. ರಾಮರಾವ್ ಅವರು ಶಂಕುಸ್ಥಾಪನೆ ಮಾಡಿದ್ದರು. ಇದೀಗ 43 ವರ್ಷಗಳ ನಂತರ ಅದೇ ಸಂಸ್ಥೆಯ ಸುಸಜ್ಜಿತ ಆಸ್ಪತ್ರೆಯನ್ನು ಮೊಮ್ಮಗ ಉದ್ಘಾಟಿಸಿದ್ದು ಇತಿಹಾಸ ಮರುಕಳಿಸಿದಂತಾಯಿತು. “ನನ್ನ ತಾತ ಅಡಿಗಲ್ಲು ಹಾಕಿದ್ದ ಸ್ಥಳಕ್ಕೆ ಇಂದು ನಾನು ಅತಿಥಿಯಾಗಿ ಬಂದಿರುವುದು ನನ್ನ ಪೂರ್ವಜನ್ಮದ ಪುಣ್ಯ” ಎಂದು ಅವರು ಭಾವುಕರಾದರು.

ಜನ್ಮ ನೀಡಿದ ಆಸ್ಪತ್ರೆಗೆ ನಮನ:

2009ರಲ್ಲಿ ತಮಗಾದ ಭೀಕರ ಅಪಘಾತವನ್ನು ನೆನೆದ ನಟ, “ಅಂದು ಅಪಘಾತವಾದಾಗ ಇದೇ ಕೆ.ಐ.ಎಂ.ಎಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನನಗೆ ಮರುಜನ್ಮ ನೀಡಿದ್ದರು. ಅವರಿಗೆ ನಾನು ಸದಾ ಋಣಿ. ಇಂದು ಭಾರತದ ವೈದ್ಯರು ವಿಶ್ವದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.

ಯುವಕರಿಗೆ ಮಹತ್ವದ ಸಂದೇಶ:

ಕಾರ್ಯಕ್ರಮದಲ್ಲಿ ಯುವಜನತೆಗೆ ಕಿವಿಮಾತು ಹೇಳಿದ ಅವರು, “ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ನಿಮ್ಮ ಹಿಂದೆ ಕಾಯುತ್ತಿರುವ ಕುಟುಂಬವನ್ನು ನೆನಪಿಸಿಕೊಳ್ಳಿ. ಸಮಾಜವನ್ನು ಡ್ರಗ್ಸ್ ಮುಕ್ತವಾಗಿಸಲು (Say No to Drugs) ಎಲ್ಲರೂ ಕೈಜೋಡಿಸಿ” ಎಂದು ಮನವಿ ಮಾಡಿದರು.

ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು:

ತಮ್ಮ ನೆಚ್ಚಿನ ನಟನನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಜನಸಂದಣಿ ಹೆಚ್ಚಾದ ಕಾರಣ ಆಸ್ಪತ್ರೆಯ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅತಿಯಾದ ಜನಸಂದಣಿಯಿಂದಾಗಿ ಆಸ್ಪತ್ರೆಯ ಎಸ್ಕಲೇಟರ್ ಕೂಡ ಜಖಂಗೊಂಡಿತು.

ಕಾರ್ಯಕ್ರಮದಲ್ಲಿ ಕೆ.ಐ.ಎಂ.ಎಸ್ ಆಸ್ಪತ್ರೆಯ ಗಣ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

 


Share this with Friends

Related Post