Sun. Dec 22nd, 2024

ತಂಬಾಕು ಬೆಳೆ:ಪಿಯೂಷ್ ಗೋಯಲ್ ಸಕಾರಾತ್ಮಕವಾಗಿ ಸ್ಪಂದನೆ-ನಿಖಿಲ್

Share this with Friends

ನವದೆಹಲಿ: ಮೈಸೂರು ಭಾಗದ ತಂಬಾಕು ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ತಂಬಾಕು ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ದೆಹಲಿಯಲ್ಲಿ ನಿಖಿಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ,
ಈ ಬಗ್ಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಗಿತ್ತು, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ನಮ್ಮ ನಿಯೋಗದಲ್ಲಿ ಇದ್ದು, ಗೋಯಲ್ ಅವರಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಆಗುತ್ತಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ಪ್ರದೇಶಗಳಲ್ಲಿ ರೈತರು ತಂಬಾಕು ಬೆಳೆಯುತ್ತಿದ್ದಾರೆ, ಬೆಲೆ ಕುಸಿತದಿಂದ ಕಂಗೆಟ್ಟಿದ್ದಾರೆ. ರೈತರ ನೆರವಿಗೆ ಬರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ಹೇಳಿದರು.

ಕಳೆದ ಒಂದು ವಾರದಿಂದ ನಾನು ದೆಹಲಿಯಲ್ಲೆ ಇದ್ದೇನೆ ತಂಬಾಕು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಕೃತಿ ವಿಕೋಪದಿಂದ ಒಳ್ಳೆಯ ಬೆಳೆ ಬಂದಿಲ್ಲ. ಗುಣಮಟ್ಟದ ತಂಬಾಕಿಗೆ ಕಂಪನಿಗಳು ಚನ್ನಾಗಿ ಹಣ ನೀಡುತ್ತಿವೆ. ಹೀಗಾಗಿ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ನೆರವಿಗೆ ಬರುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬ್ರೆಜಿಲ್ ಸೇರಿದಂತೆ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಜನವರಿ ತಿಂಗಳ ವೇಳೆಗೆ ತಂಬಾಕು ಕಟಾವಿಗೆ ಬರಲಿದೆ. ಡಿಸೆಂಬರ್ ಒಳಗಾಗಿ ನಮ್ಮ ರೈತರ ತಂಬಾಕು ಮಾರಾಟ ಆಗಬೇಕಿದೆ. ಇದಕ್ಕೆ ಸಚಿವ ಪಿಯೂಷ್ ಗೋಯಲ್ ಅವರು ಹಾಗೂ ವಾಣಿಜ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಿಖಿಲ್ ಹೇಳಿದರು.


Share this with Friends

Related Post