ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು (COTPA) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕಳೆದ ಒಂದು ವಾರದಲ್ಲಿ ನಗರದಾದ್ಯಂತ ನಡೆಸಿದ ದಿಢೀರ್ ದಾಳಿಯಲ್ಲಿ ಸಾವಿರಾರು ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ.
ಫೆಬ್ರವರಿ 18 ರಿಂದ 26 ರವರೆಗೆ ಜಿಬಿಎ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು, “ಒಟ್ಟು 2,027 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ನಿಯಮ ಮೀರಿ ತಂಬಾಕು ಮಾರಾಟ ಮತ್ತು ಧೂಮಪಾನ ಮಾಡುತ್ತಿದ್ದ 1,609 ಪ್ರಕರಣಗಳನ್ನು ದಾಖಲಿಸಲಾಗಿದೆ. ಉಲ್ಲಂಘನೆದಾರರಿಂದ ಒಟ್ಟು 7,47,600 ರೂಪಾಯಿ ದಂಡ ವಸೂಲಿ ಮಾಡಲಾಗಿದೆ” ಎಂದು ತಿಳಿಸಿದರು.
ಯಾವೆಲ್ಲಾ ಕ್ರಮ?
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಶಾಲಾ-ಕಾಲೇಜುಗಳ ಸಮೀಪ ತಂಬಾಕು ಮಾರಾಟ, ಅಪ್ರಾಪ್ತರಿಗೆ ಸಿಗರೇಟ್ ನೀಡುವುದು ಹಾಗೂ ನಿಷೇಧಿತ ಇ-ಸಿಗರೇಟುಗಳ ಮಾರಾಟದ ವಿರುದ್ಧ ಈ ಕಾರ್ಯಾಚರಣೆಯಲ್ಲಿ ಮುಖ್ಯವಾಗಿ ಗಮನಹರಿಸಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲೂ ಇಂತಹ ಕಟ್ಟುನಿಟ್ಟಿನ ತಪಾಸಣೆಗಳು ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.

