Fri. Mar 6th, 2026

ಇಂದಿನ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ: ಬಿ.ವೈ.ವಿಜಯೇಂದ್ರ

Share this with Friends

ಬೆಂಗಳೂರು: ಮೊನ್ನೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಯಶಸ್ಸು ಪಡೆದಿದೆ ಇದು ರಾಜ್ಯ ಸರ್ಕಾರದ ವೈಫಲ್ಯ ಮತ್ತು ಆಡಲಕಿತ ವಿರೋಧಿ ಅಲೆಗೆ ನಿದರ್ಶನವಾಗಿದೆ,ಮುಂದೆ ಬರಲಿರುವ ಚುನಾವಣೆಗಳಿಗೂ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ವೀರ ಬಾಲಕರ ದಿನ ಕಾರ್ಯಕ್ರಮದ ಅಂಗವಾಗಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು,ವೀರ ಬಾಲಕರ ಬಲಿದಾನದ ಜ್ಞಾಪಕಾರ್ಥವಾಗಿ ಇಂದಿನ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಟ್ಟ ಬಾಲಕರು 8ನೇ ವಯಸ್ಸಿನಲ್ಲಿ ಮತಾಂತರ ಆಗಬೇಕೆಂದು ಏನೇ ಒತ್ತಡ ಬಂದರೂ ಅದಕ್ಕೆ ಒಪ್ಪದೇ ವೀರ ಮರಣ ಹೊಂದಿದ ಘಟನೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ವೀರಮರಣವನ್ನು ಮತ್ತು ಬಲಿದಾನವನ್ನು ದೇಶಕ್ಕೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.

ಮೊನ್ನೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಯಶಸ್ಸು ಪಡೆದಿದೆ. ದಕ್ಷಿಣ ಕನ್ನಡದ ಬಜೆಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯಿತಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಬಹುಮತ ಪಡೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಜಯಶೀಲರಾಗಿದ್ದರೆ ಇದು ಬಿಜೆಪಿ ಪರ ಜನರ ಒಲವಿಗೆ ನಿದರ್ಶನ ಎಂದರು.

ಬಿಜೆಪಿ ಮುಂದುವರಿದ ಜನಾಂಗಕ್ಕೆ ಸೇರಿದ ಪಕ್ಷ ಎಂದು ಕಾಂಗ್ರೆಸ್ಸಿನವರು ಟೀಕಿಸುತ್ತಾರೆ. ಎಲ್ಲ ಎಸ್‍ಸಿ, ಎಸ್‍ಟಿ, ಹಿಂದುಳಿದ ಸಮಾಜದ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು.

ಪಟ್ಟಣ ಪಂಚಾಯಿತಿ ಚುನಾವಣಾ ವಿಜೇತರನ್ನು ಅಭಿನಂದಿಸಿದ ಅವರು, ಪರಾಭವಗೊಂಡವರು ಆತಂಕ ಪಡಬೇಕಿಲ್ಲ.ಮೋದಿ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದವರಲ್ಲ. ಬೂತ್ ಅಧ್ಯಕ್ಷರಾಗಿದ್ದು, ಕಾರ್ಯಕರ್ತರ ಸಂಘಟನೆ ಮಾಡಿ, ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ 14 ವರ್ಷ ಸೇವೆ ಸಲ್ಲಿಸಿದ್ದಾರೆ. 11 ವರ್ಷ ಸತತ ಕೇಂದ್ರದಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜನಸೇವಕ ಎಂಬ ಭಾವನೆ ಅವರದು. ಅಂಥ ಬಿಜೆಪಿ ಕಾರ್ಯಕರ್ತ ಎಂಬುದು ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಯಾರೂ ಸಂತಸದಿಂದಿಲ್ಲ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ತಮ್ಮ ಮುಖವಾಡ ಕಳಚಿತ್ತು. ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ, ಯಡಿಯೂರಪ್ಪ ಅವರು 4 ಸಾವಿರ ನೀಡುತ್ತಿದ್ದರು. ಅದಕ್ಕೆ ಕಲ್ಲು ಹಾಕಿದರು.

ಬಸವರಾಜ ಬೊಮ್ಮಾಯಿಯವರು ರೈತರ ಮಕ್ಕಳಿಗಾಗಿ ಆರಂಭಿಸಿದ ವಿದ್ಯಾನಿಧಿ ಯೋಜನೆಗೂ ಕಲ್ಲು ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಉತ್ತರ ಕರ್ನಾಟಕದ ಭೀಕರ ಅತಿವೃಷ್ಟಿ ಇದ್ದರೂ ಸಚಿವರು ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ಆಕ್ಷೇಪಿಸಿದರು.


Share this with Friends

Related Post