ಬೆಂಗಳೂರು,ಮೇ.20: ಬೆಂಗಳೂರಿನ ಹೊರವಲಯದ ಸಿಂಗೇನ ಅಗ್ರಹಾರದ ಫಾರಂ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ನಟ,ನಟಿಯರು ಸಿಕ್ಕಿಬಿದ್ದಿದ್ದಾರೆ.
ದಾಳಿ ವೇಳೆ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ, ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ ಜಿ.ಆರ್ ಫಾರಂ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ರೇವ್ ಪಾರ್ಟಿ ಆಯೋಜಿಸಿದ್ದ.
ಪಾರ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಯುವಕ ಯುವತಿಯರಿದ್ದರು.
ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿತ್ತು, ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿವೆ
ಸ್ಥಳದಲ್ಲಿದ್ದ ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್‍ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಪತ್ತೆಯಾಗಿದೆ.
ಪಾರ್ಟಿಗೆ ಯುವಕರು ಜಾಗ್ವಾರ್ ಹಾಗೂ ಆಡಿ ಕಾರುಗಳಲ್ಲಿ ಬಂದಿದ್ದು, ಕೆಲವರನ್ನು ಹೈದರಾಬಾದ್‍ನಿಂದ ಕರೆಸಿಕೊಂಡಿದ್ದು, ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂಬ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ಭಾನುವಾರ ಸಂಜೆ 5 ಗಂಟೆಯಿಂದ ಇಂದು ಮುಂಜಾನೆ 6 ಗಂಟೆ ವರೆಗೂ ಪಾರ್ಟಿ ನಡೆಸಲು ಮುಂದಾಗಿದ್ದರು. ಪಾರ್ಟಿಗೆ ಸುಮಾರು 30 ರಿಂದ 50 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಿಸಿಬಿ ಅಧಿಕಾರಿಗಳು ನಾರ್ಕೊಟಿಕ್ಸ್ ಸ್ನಿಫರ್ ಡಾಗ್‍ಗಳಿಂದ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ, ಕಾರುಗಳ ಮಾಲೀಕರ ಸಮ್ಮುಖದಲ್ಲಿ ಕಾರುಗಳನ್ನು ಪರಿಶೀಲಿಸಲಾಗುತ್ತಿದೆ.
ರೇವ್ ಪಾರ್ಟಿ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.