ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ. ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ನಾಳೆ ಮೈಸೂರು ಬಂದ್ ಗೆ ಕರೆ ನೀಡಿದೆ.
ಮೈಸೂರು ಬಂದ್ ಗೆ ಪ್ರಗತಿಪರ ಸಂಘಟನೆ, ಅಂಬೇಡ್ಕರ್ ಸಂಘ, ಪೌರ ಕಾರ್ಮಿಕರ ಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ.ಜತೆಗೆ ಮೈಸೂರು ಬಂದ್ ಗೆ ಬೆಂಬಲ ಕೋರಿ ಸಂಘಟನೆ ಮುಖಂಡರು ಕರ ಪತ್ರ ಹಂಚಿದ್ದಾರೆ.
ಮೈಸೂರು ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ಬಡಗಲಪುರ ನಾಗೇಂದ್ರ ಬಣ ಬೆಂಬಲ ಸೂಚಿಸಿ ಪತ್ರ ಬರೆದಿದೆ.
ಬಂದ್ ಗೆ ಮೈಸೂರು ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದೆ. ಹೋಟೆಲ್ ಮುಚ್ಚದೆ ಬಂದ್‌ಗೆ ನೈತಿಕ ಬೆಂಬಲ ನೀಡಲಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ್ ಗೌಡ ತಿಳಿಸಿದ್ದಾರೆ.
ನಮಗೆ ಬಾಬಾಸಾಹೇಬ್ ಡಾ ಬಿ. ಆರ್ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಇದೆ. ನಮ್ಮದು ಆತಿಥ್ಯದ ಉದ್ಯಮ ಅಗತ್ಯ ಸೇವೆಗಳಡಿಯಲ್ಲಿ ಬರುತ್ತದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರಿಗೆ, ಆಸ್ಪತ್ರೆಯ ರೋಗಿಗಳಿಗೆ ಊಟೋಪಚಾರ, ಕುಡಿಯುವ ನೀರು ಅತ್ಯಂತ ಅಗತ್ಯವಾಗಿರುತ್ತದೆ,ಸೇವೆ ನೀಡುವವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡುದ್ದಾರೆ.
ಬಂದ್ ದಿನ ಕಪ್ಪು ಪಟ್ಟಿ ಧರಿಸಿ ಬಂದ್ ಗೆ ಬೆಂಬಲ ನೀಡುತ್ತೇವೆ. ಪ್ರತಿಭಟನೆಯಲ್ಲಿ ಹೋಟೆಲ್ ಮಾಲೀಕರು ಭಾಗಿಯಾಗುತ್ತಾರೆ. ಆದರೆ ಹೋಟೆಲ್ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಮೈಸೂರು ಬಂದ್ ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ಬೆಂಬಲ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಎಸ್ ಶಿವರಾಮ್, ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಈ ನಿಟ್ಟಿನಲ್ಲಿ ನಾಳೆ ಮೈಸೂರು ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ನಾಳಿನ ಬಂದ್ ಶಾಂತಿಯುತವಾಗಿ ಇರುತ್ತದೆ. ಮೈಸೂರಿನ ಜನತೆ ಕೂಡ ಈ ಬಂದ್ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಅವರು, ಮೈಸೂರು ನಗರದ ಹಲವು ಕಡೆ ಪ್ರತಿಭಟನೆ ಕೂಡಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.