Sat. Mar 14th, 2026

ಚಿಂಚೋಳಿ ಅಭಯಾರಣ್ಯಕ್ಕೆ ಪ್ರವಾಸೋದ್ಯಮದ ಕಳೆ: ಜೀಪ್ ಸಫಾರಿ ಸೇರಿ ವಿವಿಧ ಸೌಲಭ್ಯಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

Share this with Friends

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಕೃತಿ ಕಾಶಿ ಎಂದೇ ಹೆಸರಾದ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಚಿಂಚೋಳಿ ಅರಣ್ಯಧಾಮದಲ್ಲಿ ನೂತನವಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಪ್ರವಾಸೋದ್ಯಮ ಉತ್ತೇಜನ ಕಾರ್ಯಕ್ರಮಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಚಿಂಚೋಳಿ ಅಭಯಾರಣ್ಯವು ಈ ಭಾಗದ ವಿಶಿಷ್ಠ ನೈಸರ್ಗಿಕ ಸಂಪತ್ತಾಗಿದೆ. ಚಿರತೆ, ಕಾಡು ನಾಯಿ, ನೀಲಗಾಯ್ ಹಾಗೂ ಕೃಷ್ಣಮೃಗಗಳಂತಹ ಅಪರೂಪದ ಪ್ರಾಣಿಗಳ ತಾಣವಾಗಿರುವ ಈ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮದ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಗುರಿ. ಕಳೆದ ವರ್ಷದ ‘ನೇಚರ್ ಟ್ರೆಕ್’ ಕಾರ್ಯಕ್ರಮದ ಯಶಸ್ಸಿನ ಬೆನ್ನಲ್ಲೇ, ಈಗ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ” ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ವಿವರ:

ಕೆಕೆಆರ್‌ಡಿಬಿ (KKRDB) ಮ್ಯಾಕ್ರೋ ಅನುದಾನದಡಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಪ್ರಮುಖ ಸೌಲಭ್ಯಗಳು ಹೀಗಿವೆ:

ಜೀಪ್ ಸಫಾರಿ: ಪ್ರವಾಸಿಗರಿಗಾಗಿ ₹24 ಲಕ್ಷ ವೆಚ್ಚದಲ್ಲಿ ಎರಡು ವಿಶೇಷ ಕ್ಯಾಂಪರ್ ವಾಹನಗಳನ್ನು ಸಫಾರಿಗಾಗಿ ಸಜ್ಜುಗೊಳಿಸಲಾಗಿದೆ.

ರಸ್ತೆ ಅಭಿವೃದ್ಧಿ: ₹64 ಲಕ್ಷ ವೆಚ್ಚದಲ್ಲಿ ಎಲ್ಲಾ ಹವಾಮಾನಕ್ಕೂ ಅನುಕೂಲವಾಗುವಂತೆ ಸಫಾರಿ ರಸ್ತೆ ನಿರ್ಮಿಸಲಾಗಿದ್ದು, ದಿನಕ್ಕೆ 6 ಟ್ರಿಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಸತಿ ಸೌಕರ್ಯ: ಪ್ರವಾಸಿಗರ ವಾಸ್ತವ್ಯಕ್ಕಾಗಿ ಚಂದ್ರಂಪಳ್ಳಿಯಲ್ಲಿ ಎರಡು ಮರದ ಕುಟೀರ ಹಾಗೂ ಗೊಟ್ಟಂಗೊಟ್ಟದಲ್ಲಿ ಎರಡು ಹೊಸ ಟೆಂಟ್ ಹೌಸ್‌ಗಳನ್ನು ₹43 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಜಲಸಾಹಸ ಕ್ರೀಡೆ: ಚಂದ್ರಂಪಳ್ಳಿ ಜಲಾಶಯದಲ್ಲಿ 12 ಆಸನಗಳ ಮೋಟಾರ್ ಬೋಟ್, ಪೆಡಲ್ ಬೋಟ್ ಹಾಗೂ ಕಯಾಕಿಂಗ್‌ಗಾಗಿ ₹14 ಲಕ್ಷ ವ್ಯಯಿಸಲಾಗಿದೆ.

“ಈ ಭಾಗದ ಮಾಣಿಕ್‌ಪುರ ಜಲಪಾತ ಹಾಗೂ ಚಂದ್ರಂಪಳ್ಳಿ ಅಣೆಕಟ್ಟುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರವಾಸೋದ್ಯಮ ಬೆಳೆದಷ್ಟೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ ಮತ್ತು ಸ್ಥಳೀಯ ಆರ್ಥಿಕತೆಗೂ ಬಲ ಬರಲಿದೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಮೂಲಕ ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರವಾಸಿಗರಿಗೂ ಚಿಂಚೋಳಿ ಅರಣ್ಯಧಾಮವು ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ.

 


Share this with Friends

Related Post