ಬೆಂಗಳೂರು, ಫೆ.12: ರಾಜ್ಯಪಾಲರು ಸಂಪ್ರದಾಯದಂತೆ ಭಾಷಣ ಮಾಡಿದ್ದಾರೆ,ಅದರಲ್ಲಿ ಉಪ್ಪು, ಹುಳಿ,ಕಾರ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ, ಆದರೆ ಅದರಲ್ಲಿ ಏನೂ ಇಲ್ಲ ಇದರಲ್ಲೇ ಗೊತ್ತಾಗುತ್ತೆ ಕಾಂಗ್ರೆಸ್ ಸರ್ಕಾರದ ಕಳಪೆ ಸಾಧನೆ ಎಂದು ಟೀಕಿಸಿದರು.
ಮೇಕೆದಾಟು ಯೋಜನೆ ಯಾಗಲಿ ಇತರೆ ನೀರಾವರಿ ಯೋಜನೆಗಳ ಬಗ್ಗೆ ಆಗಲಿ ಪ್ರಸ್ತಾಪವೇ ಇಲ್ಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹೇಳಿಲ್ಲ ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ ಎಂದು ಚಾಟಿ ಬೀಸಿದರು.
ಇವರಿಗೆ ಸ್ಪಷ್ಟ ಬಹುಮತದ ಕೊಟ್ಟಿದ್ದಾರೆ ಜನ. ಆದರೆ, ಇವರು ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಜನರಿಗೆ ಸರಿಯಾಗಿ ತಲುಪದ ಗ್ಯಾರೆಂಟಿಗಳ ಬಗ್ಗೆ ಗೌರವಾನ್ವಿತ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದು ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದ್ದೇವೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಅಲ್ಲೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದರು.
ಈ ಸರಕಾರ ಜಾಹೀರಾತು ಮೇಲೆ ನಡೆಯುತ್ತಿದೆ. ಜನಸ್ಪಂದನಕ್ಕೆ ಬಂದಿದ್ದ ಮಹಿಳೆಯರು ಗೃಹಲಕ್ಷಿ ಯೋಜನೆಯಲ್ಲಿ ಹಣ ಬಂದಿಲ್ಲಾ ಅಂತಾ ಸಿಎಂ ಅವರಿಗೆ ದೂರು ನೀಡಿದರು ಎಂದು ಗ್ಯಾರಂಟಿ ವೈಫಲ್ಯಗಳನ್ನು ಎಚ್ ಡಿ ಕೆ ಬಿಚ್ಚಿಟ್ಟರು
ನಾನು ಸಿಎಂ ಆಗಿದ್ದಾಗ ಜನತಾದರ್ಶನ ಮಾಡಿದ್ದೆ. ಅದಕ್ಕೆ ಬಸ್ ನಲ್ಲಿ ಜನರನ್ನು ಕರೆತಂದಿರಲಿಲ್ಲ. ರಾತ್ರಿ ಮೂರು ಗಂಟೆಗೆ ಬಂದು ಜನ ಕಾಯುತ್ತಿದ್ದರು. ಬೆಳಗ್ಗೆ 9 ಗಂಟೆಯಿಂದ ಮಧ್ಯರಾತ್ರಿವರೆಗೂ ಆ ಜನರ ಅಹವಾಲು ಕೇಳಿ ಸ್ಥಳದಲ್ಲಿಯೇ ಅವರ ಸಂಕಷ್ಟ ನಿವಾರಣೆ ಮಾಡಿದ್ದೇನೆ.
ಆದರೆ, ನಾನೆಂದೂ ಜಾಹೀರಾತು ಕೊಟ್ಟುಕೊಂಡು ಪ್ರಚಾರ ಪಡೆದುಕೊಳ್ಳಲಿಲ್ಲ. ದಿನಕ್ಕೆ 100 ಸುಳ್ಳು ಹೇಳಿಕೊಂಡು ಓಡಾಡುವ ಇವರು, ರಾಜ್ಯಪಾಲರಿಂದಲೂ ಸುಳ್ಳು ಭಾಷಣ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.