ಬೆಂಗಳೂರು: ಚಿತ್ರದುರ್ಗ ಸಮೀಪ ನಡೆದ ಸ್ಲೀಪರ್ ಬಸ್ ಅಗ್ನಿ ಅವಘಡ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸಾರಿಗೆ ಇಲಾಖೆಯು ರಾಜ್ಯದಲ್ಲಿನ ಖಾಸಗಿ ಬಸ್‌ಗಳಿಗೆ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸಿದ್ದು, ಏಳು ಅಂಶಗಳ ನಿಯಮ ಬಿಡುಗಡೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಇನ್ಮುಂದೆ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾಗುವುದು ಇಲ್ಲದಿದ್ದರೆ ನೀಡಲ್ಲ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದರು.
ರಾಜ್ಯದಲ್ಲಿ ಸಂಭವಿಸಿರುವ ಸ್ಲೀಪರ್ ಕೋಚ್ ಬಸ್‌ಗಳ ಅಗ್ನಿ ಅವಘಡಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಇಲ್ಲ ಹಾಗಾಗಿ ಸಾರಿಗೆ ಇಲಾಖೆ ನಿಯಮಾವಳಿ ರೂಪಿಸಿದ್ದು ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಸೂಚನೆ ನೀಡಿದರು.
ಸಾರಿಗೆ ಇಲಾಖೆಯಿಂದ ಖಾಸಗಿ ಬಸ್‌ಗಳಿಗೆ ಸುರಕ್ಷತಾ ಮಾನದಂಡಗಳು:
ಚಾಲಕನ ಆಸನದ ಹಿಂಭಾಗದಲ್ಲಿ ತುರ್ತು ನಿರ್ಗಮನ ದ್ವಾರದ ವ್ಯವಸ್ಥೆ ಇರಬೇಕು
ಸ್ವೀಪರ್ ಬರ್ತ್ ಗಳಲ್ಲಿ ‘ಸೈಡರ್ ಓಪನ್’ ಕಡ್ಡಾಯ
ಒಂದು ತಿಂಗಳೊಳಗೆ ಅಗ್ನಿ ಪತ್ತೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು
ಕನಿಷ್ಠ 10 ಕೆ.ಜಿ. ತೂಕದ ಅಗ್ನಿಶಾಮಕ ಉಪಕರಣಗಳನ್ನು ಬಸ್ ನಲ್ಲಿ ಇರಿಸಬೇಕು
ಬಸ್ ಕವಚ ನಿರ್ಮಾಣ ಸಂಸ್ಥೆಯ ಮಾನ್ಯತೆ ಪರಿಶೀಲನೆ ನಂತರವೇ ನೋಂದಣಿ ಪ್ರಕ್ರಿಯೆ
ಚಾಸಿಸ್ ಗೆ ಅನಧಿಕೃತ ವಿಸ್ತರಣೆ ಮಾಡಲು ನಿರ್ಬಂಧ
ಅನುಮೋದಿತ ಪರೀಕ್ಷಾ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ

