Thu. Dec 26th, 2024

ನಿಜವಾದ ಪ್ರಜಾಪ್ರಭುತ್ವ ಇದ್ದದ್ದು ರಾಜರ ಆಳ್ವಿಕೆಯಲ್ಲಿ:ಬನ್ನೂರು ಕೆ. ರಾಜು

Share this with Friends

ಮೈಸೂರು, ಜು.17: ನಿಜವಾದ ಪ್ರಜಾಪ್ರಭುತ್ವ ಇದ್ದದ್ದು ಮಹಾರಾಜರ ಆಳ್ವಿಕೆಯಲ್ಲಿ, ಅದರಲ್ಲೂ ವಿಶೇಷವಾಗಿ ಮೈಸೂರು ಸಂಸ್ಥಾನವನ್ನು ಆಳಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎಂದು ಸಾಹಿತಿ ಬನ್ನೂರು ಕೆ. ರಾಜು ತಿಳಿಸಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಮಹಾರಾಜ ಕಾಲೇಜು‌ ಆವರಣದಲ್ಲಿ ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಮೈಸೂರು ಸಾಮ್ರಾಜ್ಯದ 22ನೇ ಮಹಾರಾಜರು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ 225ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ನಮ್ಮ ಪ್ರಭುಗಳು ಇಡೀ ರಾಜ್ಯವನ್ನ ಮತ್ತು ರಾಷ್ಟ್ರವನ್ನು ಅವರ ಸ್ವಾರ್ಥಕ್ಕಾಗಿ ಅಂಧಕಾರಕ್ಕೆ ತಳ್ಳುತ್ತಿದ್ದಾರೆ, ಹಾಗಾಗಿ ಇಡೀ ರಾಜ್ಯಕ್ಕೆ ಬೆಳಕನ್ನು ನೀಡಿದಂತಹ ನಮ್ಮ ರಾಜರುಗಳು ಅವಿಸ್ಮರಣೀಯರು ಎಂದು ಹೇಳಿದರು.

ಈಗಿನ ಆಧುನಿಕ ಪ್ರಭುಗಳು ರಾಜ್ಯವನ್ನು ಸರಿಯಾಗಿ ಆಳದೇ ಸ್ವಾರ್ಥದ ಹಾದಿಯಲ್ಲಿ ಮುನ್ನಡೆದರೆ ಪ್ರಜೆಗಳು ಕಷ್ಟಕ್ಕೆ ಸಿಲುಕಿ ಅಭಿವೃದ್ಧಿಯ ಕ್ಷಾಮವನ್ನು ಎದುರಿಸಬೇಕಾಗುತ್ತದೆ‌ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಅಭಿವೃದ್ಧಿಗೆ ಮುನ್ನುಡಿ ಬರೆದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಾಪುರುಷರು,ಧಾರ್ಮಿಕವಾಗಿ ಸಾಹಿತ್ಯಕವಾಗಿ, ವೈಜ್ಞಾನಿಕವಾಗಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದರು ಎಂದು ಬನ್ನೂರು ರಾಜು ತಿಳಿಸಿದರು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ ಮಹಾರಾಜರ ಆಳ್ವಿಕೆ ಈಗಲೂ ಇದ್ದಿದ್ದರೆ ನಾವೆಲ್ಲ ಬಹಳ ಸಂತೋಷವಾಗಿರುತ್ತಿದ್ದೆವು, ಪ್ರಜಾಪ್ರಭುತ್ವ ಬಂದಮೇಲೆ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆ ಮೈಸೂರು ರಾಜ್ಯಕ್ಕೆ ಅಪಾರ ಎಂದು ಸ್ಮರಿಸಿದರು.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮೈಸೂರು ನಾಡನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ – ಜಿಲ್ಲಾಡಳಿತದ ವತಿಯಿಂದ ಪ್ರತಿ ವರ್ಷ ಆಚರಣೆ ಮಾಡಬೇಕು ಎಂದು ಆಗ್ರಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಎಲ್ಲರಿಗೂ ಸಿಹಿ ವಿತರಣೆ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಕೆ ರಾಮು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆ ನಾರಾಯಣ ಗೌಡ, ಮಹಾರಾಜ ಕಾಲೇಜು ಪ್ರಾಂಶುಪಾಲ ಉದಯಶಂಕರ್, ಗೋಲ್ಡ್ ಸುರೇಶ್, ಕೃಷ್ಣಪ್ಪ, ಕುಮಾರ್ ಬಸಪ್ಪ ಗೌಡ, ಪ್ರಭುಶಂಕರ್, ಪ್ರಜೀಶ್, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ವಿಜಯೇಂದ್ರ, ನಂದಕುಮಾರ್, ನೇಹಾ, ಭಾಗ್ಯಮ್ಮ, ಮಂಜುಳಾ, ಪ್ರಭಾಕರ್, ಹನುಮಂತಯ್ಯ, ನೇಹಾ, ಮಂಜುಳಾ, ರಾಧಾಕೃಷ್ಣ, ರಘು ಅರಸ್, ಸುಬ್ಬೇಗೌಡ, ರಮೇಶ್, ಸಂಜಯ್, ನಾಗರಾಜು, ವಿಷ್ಣು ಮತ್ತಿತರರು ಹಾಜರಿದ್ದರು.


Share this with Friends

Related Post