Fri. Mar 6th, 2026

ತುಂಗಭದ್ರಾ ನೀರು ಬಳಕೆ:  ಆಂಧ್ರ ಸಿಎಂ ಭೇಟಿಗೆ ಡಿ.ಕೆ. ಶಿವಕುಮಾರ್ ಕಾಲಾವಕಾಶ ಕೋರಿಕೆ

Share this with Friends

ರಾಯಚೂರು: ತುಂಗಭದ್ರಾ ಅಣೆಕಟ್ಟಿನಿಂದ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ 30 ಟಿಎಂಸಿ ನೀರನ್ನು ಉಳಿಸಿ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ತಾವು ಸಿದ್ಧರಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಯಚೂರು ಉತ್ಸವದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ಅಂತರರಾಜ್ಯ ನದಿ ಹಂಚಿಕೆಯ ವಿಷಯವಾಗಿರುವ ಕಾರಣ ಆಂಧ್ರ ಸಿಎಂ ಅವರ ಸಹಕಾರ ಅತ್ಯಗತ್ಯವಾಗಿದೆ. ತುಂಗಭದ್ರಾ ನೀರು ಸಮುದ್ರಕ್ಕೆ ಪಾಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಆಂಧ್ರ ಮುಖ್ಯಮಂತ್ರಿಗಳ ಭೇಟಿಗೆ ಡಿ.ಕೆ. ಸಮಯ ಕೋರಿದ್ದೇನೆ. ಆದರೆ, ಈವರೆಗೆ ಅವರಿಗೆ ಭೇಟಿಗೆ ಅವಕಾಶ ಲಭ್ಯವಾಗಿಲ್ಲ. ಆಂಧ್ರ ಸಿಎಂ ಕಾಲಾವಕಾಶ ನೀಡಿದರೆ ಕೂಡಲೇ ಚರ್ಚೆ ನಡೆಸಿ, ಪೋಲಾಗುತ್ತಿರುವ ನೀರನ್ನು ಉಳಿಸಿ ಈ ಭಾಗದ ರೈತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಜಲಾಶಯದ ಎಲ್ಲಾ ಗೇಟ್ ಬದಲಾವಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.

ಕೊನೆ ಭಾಗದ ರೈತರಿಗೆ ಆದ್ಯತೆ: ಕಾಲುವೆಗಳ ಮೇಲ್ಭಾಗದಲ್ಲಿ ಅಕ್ರಮವಾಗಿ ನೀರೆತ್ತುವುದರಿಂದ ಕಟ್ಟಕಡೆಯ ರೈತರಿಗೆ ನೀರು ತಲುಪುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಶಾಸಕರ ಒತ್ತಡದ ಮೇರೆಗೆ ಹೊಸ ಕಾನೂನು ತರಲಾಗಿದ್ದು, ಇನ್ನು ಮುಂದೆ ಕಾಲುವೆಯ ಕೊನೆಯವರೆಗೂ ನೀರು ತಲುಪುವುದನ್ನು ಖಾತ್ರಿಪಡಿಸಲಾಗುವುದು ಎಂದರು

ಗೇಟ್ ಬದಲಾವಣೆ ಹಾಗೂ ಅಭಿವೃದ್ಧಿ ಕಾಮಗಾರಿ: ತುಂಗಭದ್ರಾ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಲು ಸರ್ಕಾರ ಬದ್ಧವಾಗಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ನವಲಿ ಸಮತೋಲನ ಜಲಾಶಯ: ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣ ಸಂಗ್ರಹ ಸಾಮರ್ಥ್ಯ ಕುಸಿದಿದ್ದು, ಇದನ್ನು ಸರಿದೂಗಿಸಲು ಕೊಪ್ಪಳದ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣದ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಈ ಎಲ್ಲ ಯೋಜನೆಗಳ ಯಶಸ್ಸಿಗೆ ನೆರೆಯ ರಾಜ್ಯಗಳ ಸಹಕಾರ ಮುಖ್ಯವಾಗಿದ್ದು, ಆಂಧ್ರ ಸಿಎಂ ಅವರು ಶೀಘ್ರದಲ್ಲೇ ಭೇಟಿಗೆ ಅವಕಾಶ ನೀಡುವ ವಿಶ್ವಾಸವನ್ನು ಉಪಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.


Share this with Friends

Related Post