Sat. Jan 4th, 2025

ಕೆರೆಗೆ ಕಾರು ಉರುಳಿ ಇಬ್ಬರು ಸಾವು; ಒಬ್ಬ ಪಾರು

Share this with Friends

ಕೊಳ್ಳೇಗಾಲ: ಕೆರೆಗೆ ಕಾರು ಉರುಳಿ ಯುವಕ,ಯುವತಿ ಮೃತಪಟ್ಟು ಒಬ್ಬ ಪಾರಾದ ಘಟನೆ ಮುಂಜಾನೆ ಕೊಳ್ಳೇಗಾಲ ತಾಲೂಕಿನ ಕುಂತೂರು ಬಳಿ ನಡೆದಿದೆ.

ಮೈಸೂರಿನ ಕುವೆಂಪುನಗರದ ಊರ್ಜಿತ್ (21) ಹಾಗೂ ಶುಭ (20) ಮೃತ ದುರ್ದೈವಿಗಳು. ಇವರ ಸ್ನೇಹಿತ ಮನ್ವಿತ್ (21) ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೂಲತಃ ಯಳಂದೂರು ತಾಲೂಕು ಗಣಿಗನೂರು ಗ್ರಾಮದವರಾದ ಶುಭ ಅವರು ಮೈಸೂರಿನ ಟೆಕ್ನೋ ಟಾಕ್ಸ್ ಕಂಪನಿಯಲ್ಲಿ ಟೆಲಿಕಾಲಾಗಿ ಕೆಲಸ ಮಾಡುತ್ತಿದ್ದರು. ಊರ್ಜಿತ್ ಗೋಲ್ಡ್ ಕಂಪನಿಯಲ್ಲಿ ಗೋಲ್ಡ್ ರಿಕವರ್ ಆಗಿ ಕೆಲಸ ಮಾಡುತ್ತಿದ್ದರು. ಮನ್ವಿತ್ ಲಯನ್ಸ್ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಈ ಮೂವರು ತಡರಾತ್ರಿ ಮೈಸೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಮುಂಜಾನೆ 2.30 ರ ಸಮಯದಲ್ಲಿ ಕುಂತೂರು ಗ್ರಾಮದ ಬಳಿ ನಿದ್ದೆಯ ಮಂಪರಿನಲ್ಲಿ ತಿರುವಿನಲ್ಲಿ ಆಯತಪ್ಪಿ ಕಾರು ಕೆರೆಗೆ ಉರುಳಿದೆ.

ಕೆರೆಯಲ್ಲಿ ನೀರು ತುಂಬಿದ್ದರಿಂದ ಉಸಿರುಗಟ್ಟಿ ಕಾರಿನಲ್ಲಿದ್ದ ಊರ್ಜಿತ್ ಹಾಗೂ ಶುಭ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಚಾಲನೆ ಮಾಡುತ್ತಿದ್ದ ಮನ್ವಿತ್ ಕಾರಿನ ಗಾಜು ಒಡೆದು ಹೊರಬಂದು ಕಾರಿನ ಮೇಲೆ ನಿಂತು ಕಾಪಾಡುವಂತೆ ಕೂಗಿಕೊಂಡಿದ್ದಾರೆ.

ಅವರ ಕೂಗು ಕೇಳಿದ ದಾರಿಹೋಕರು ಕೂಡಲೇ ಸಮೀಪದ ಮಾಂಬಳ್ಳಿ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಯಳಂದೂರು ಸಿಪಿಐ ಶ್ರೀಕಾಂತ್, ಮಾಂಬಳ್ಳಿ ಪಿಎಸ್ಐ ಕರಿಬಸಪ್ಪ ಪೇದೆ ಶಿವಕುಮಾರ್ ಮತ್ತು ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಬೋಟ್ ತರಿಸಿ ಕಾರಿನ ಮೇಲೆ ನಿಂತಿದ್ದ ಮನ್ವಿತ್ ನನ್ನು ರಕ್ಷಿಸಿದ್ದಾರೆ, ನಂತರ ಕಾರಿನಲ್ಲಿದ್ದ ಇಬ್ಬರ ದೇಹಗಳನ್ನು ಹೊರ ತೆಗೆಸಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

ಈ ಸಂಬಂಧ ಮಾಂಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post