Fri. Mar 6th, 2026

ಯುಜಿಸಿಇಟಿ:ಫೆ.16 ಅರ್ಜಿ ಸಲ್ಲಿಸಲು ಕೊನೆ ದಿನ

Share this with Friends

ಬೆಂಗಳೂರು: 2026ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಫೆಬ್ರುವರಿ 16ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ‌ ಮಾಡಿದ್ದು, ಅರ್ಜಿ ಶುಲ್ಕ ಪಾವತಿಸಲು ಫೆ.18 ಕೊನೆ ದಿನ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ಇತರ ವೃತ್ತಿಪರ‌ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)/ ಕೌನ್ಸೆಲಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ನೀಟ್ ಅಂಕಗಳ ಆಧಾರದ ಮೇಲೆ ಕೇವಲ ಸೀಟು ಹಂಚಿಕೆಯನ್ನು ಪ್ರಾಧಿಕಾರ ಮಾಡಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ನೀಡಿರುವ ಕಾರಣ ಅಭ್ಯರ್ಥಿಗಳು ಸಾವಧಾನದಿಂದ ಸಿಇಟಿ ಮಾಹಿತಿಯನ್ನು ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ‌ ಮಾಡಬೇಕು. ಅಭ್ಯರ್ಥಿಗಳು ತಮಗೆ ಅನ್ವಯವಾಗುವ ಮೀಸಲಾತಿಗಳಿಗೆ ಪೂರಕವಾಗಿ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಂಡು ಅರ್ಜಿ ಭರ್ತಿ ಮಾಡಬೇಕು ಎಂದು ಅವರು ಸಲಹೆ‌ ನೀಡಿದ್ದಾರೆ.

ಪ್ರಸಕ್ತ ಸಾಲಿನ ಅರ್ಜಿಯು ಆಧಾರ್ ಆಧಾರಿತ ಅರ್ಜಿಯಾಗಿದ್ದು, ಅದರಲ್ಲಿನ ಹೆಸರು ಇತ್ಯಾದಿ ಅಂಶಗಳು ತನ್ನಿಂತಾನೆ ಅರ್ಜಿಯಲ್ಲಿ ಬಂದು ಕೂರಲಿವೆ. ಇದಲ್ಲದೆ, ಇ-ಮೇಲ್ ಮೂಲಕವೂ ಓಟಿಪಿ ಜತೆಗೆ ಪ್ರತಿ‌ ಹಂತದ ಮಾಹಿತಿಯನ್ನು ತಿಳಿಸುವ ವಿಶೇಷ ವ್ಯವಸ್ಥೆ ಯನ್ನು ಮಾಡಲಾಗಿದೆ. ವಾಟ್ಸ್ ಅಪ್ ಮೂಲಕವೂ ಸಂದೇಶಗಳು ರವಾನೆಯಾಗಲಿವೆ ಎಂದು ಅವರು ವಿವರಿಸಿದ್ದಾರೆ.

ಆರ್ಜಿ ಭರ್ತಿ ಸಂಬಂಧ ಎಲ್ಲ ಕಾಲೇಜು ಸಿಬ್ಬಂದಿಗೆ ಹತ್ತು ದಿನಗಳ ಕಾಲ ಆನ್ ಲೈನ್ ತರಬೇತಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿಯೇ ಅರ್ಜಿ ಭರ್ತಿ ಮಾಡಿ, ಸಲ್ಲಿಸಬಹುದು. ಅಗತ್ಯಬಿದ್ದಾಗ ಉಪನ್ಯಾಸಕರ ನೆರವು ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಸ್ಯಾಟ್ಸ್ ಮತ್ತು ಆರ್ ಡಿ ಸಂಖ್ಯೆ ದಾಖಲಿಸಿದ ನಂತರ ಆನ್ ಲೈನ್ ನಲ್ಲಿ ವೆರಿಫಿಕೇಷನ್ ಆಗುವ ಅಭ್ಯರ್ಥಿಗಳು ಯಾವ ಕಾಲೇಜಿಗೆ ಪರಿಶೀಲನೆ ಸಲುವಾಗಿ ಹೋಗುವ ಅಗತ್ಯ ಇಲ್ಲ. ನೇರವಾಗಿ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಆನ್ ಲೈನ್ ನಲ್ಲಿ ಪರಿಶೀಲನೆ ಆಗದವರು ಕಾಲೇಜು ಹಂತದಲ್ಲೇ ಪರಿಶೀಲನೆ ಮಾಡಿಸಿಕೊಳ್ಳಬೇಕು. ಅದರ ನಂತರ ಅರ್ಜಿ ಮುದ್ರಣ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆ ಯನ್ನು ಏಪ್ರಿಲ್ 23 ಮತ್ತು 24 ರಂದು ನಡೆಸಲು ಈಗಾಗಲೇ ದಿನಾಂಕಗಳನ್ನು ಘೋಷಿಸಿದ್ದು ಆ ಪ್ರಕಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.


Share this with Friends

Related Post