ಮೈಸೂರು,ಜೂ.23:ಇಂತಹ ಆಧುನಿಕ ಕಾಲದಲ್ಲೂ ಅಸ್ಪೃಶ್ಯತೆ ಆಚರಣೆ ಇರುವುದು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು.
ನಮ್ಮನ್ನಾಳುವ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿದೆ.
ಈ ಬಗ್ಗೆ ದೂರು ಬಂದ ಹಿನ್ನಲೆ ತಹಸೀಲ್ದಾರ್ ಮಹೇಶ್ ಕುಮಾರ್ ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿ ಅಸ್ಪೃಶ್ಯತೆಯ ಪಿಡುಗಿಗೆ ಬೇಸರ ವ್ಯಕ್ತಪಡಿಸಿದ್ದಾರೆ.ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆ ವರುಣಾ ಬಳಿಯ ಕಿರಾಳು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಬಗ್ಗೆ ದೂರು ಬಂದಿದೆ.ಹಾಗಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ ಮಾಡದಂತೆ ತಿಳಿಹೇಳಿದರು.
ಈ ಬಗ್ಗೆ ಪರಿಶಿಷ್ಠ ಜಾತಿಗೆ ಸೇರಿದ ನವೀನ್ ಎಂಬುವರು ತಹಸೀಲ್ದಾರ್ ರವರಿಗೆ ದೂರು ನೀಡಿದ್ದರು.ವಿದ್ಯಾವಂತ ನಾಗರೀಕನಾದ ನನಗೆ ಗ್ರಾಮದ ಶಂಭುಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಅರ್ಚಕರು ಹಾಗೂ ಗ್ರಾಮಸ್ಥರು ಅವಕಾಶ ನೀಡದೆ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು.
ಕೂಡಲೇ ಎಚ್ಚೆತ್ತ ತಹಸೀಲ್ದಾರ್ ವರುಣಾ ಠಾಣೆಯ ಪಿ ಎಸ್ಸೈ ಚೇತನ್ ಹಾಗೂ ಇತರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನ ಒಲಿಸಿ ನಿರ್ಭಂಧ ಹೇರಿದ್ದ ನವೀನ್ ರವರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿದರು.ನಂತರ ನವೀನ್ ಅಧಿಕಾರಿಗಳ ಸಮ್ಮುಖದಲ್ಲೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದರು.
ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಸಭೆ ಕರೆದು ಅಸ್ಪೃಶ್ಯತೆ ಆಚರಿಸದಂತೆ ಜಾಗೃತಿ ಮೂಡಿಸಿದ್ದಲ್ಲದೆ ಮತ್ತೆಂದೂ ಹೀಗಾಗಬಾರದು ಏನಾದರೂ ಇದೇ ರೀತಿ ಆದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಎಚ್ಚರಿಸಿ ಬಂದಿದ್ದಾರೆ.
ತಹಸೀಲ್ದಾರ್ ಮಹೇಶ್ ಕುಮಾರ್ ಅವರಿಗೆ ಉಪತಹಸೀಲ್ದಾರ್ ಲತಾ ಶರಣಮ್ಮ,ಗ್ರಾಮ ಆಡಳಿತಾಧಿಕಾರಿಗಳಾದ ಕೀರ್ತಿಕುಮಾರ್ ಮತ್ತು ಅಬ್ದುಲ್ ರಶೀದ್ ಸಾಥ್ ನೀಡಿದರು.