ಬೆಂಗಳೂರು, ಮಾ,13: ಕಾಂಗ್ರೆಸ್ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಾನವೀಯತೆ ಇಲ್ಲದ
ಪೌರತ್ವ ಕೊಡಬೇಕೆ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎಂಬ ಸಾಮಾನ್ಯ ಜ್ಞಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಲ್ಲ ಎಂದು ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಬೇರೆ ದೇಶಗಳಿಂದ ಬಂದ ಅಲ್ಪಸಂಖ್ಯಾತರು ಪಾದಚಾರಿ ಮಾರ್ಗದಲ್ಲಿ ಬದುಕುತ್ತಿದ್ದು, ಆಶ್ರಯ ಕಳೆದುಕೊಂಡಿದ್ದಾರೆ. ಮಾನವೀಯತೆ ಇಲ್ಲದ ಕಾಂಗ್ರೆಸ್ಸಿಗರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದಾರೆ, ಪೌರತ್ವ ಕೊಡಬೇಕೆ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.ಆ ಸಾಮಾನ್ಯ ಜ್ಞಾನ ಮುಖ್ಯಮಂತ್ರಿಗಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ಈ ಸಮಸ್ಯೆಯನ್ನು ಪರಿಹರಿಸಲು ಕೂಡ ಸರ್ಕಾರಕ್ಕೆ ಯೋಗ್ಯತೆಯಿಲ್ಲ. ಕಾವೇರಿ ಟ್ರಿಬ್ಯುನಲ್‌ನಲ್ಲಿ ಸರಿಯಾಗಿ ವಾದಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡಿನ ಸ್ನೇಹಿತರಾದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಟಿಕೆಟ್‌ಗಾಗಿ ಕಾವೇರಿಯನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಸಿಗುವುದಿಲ್ಲವೆಂದು ಯಾರೂ ಊಹೆ ಮಾಡಿಕೊಂಡು ಮಾತನಾಡುವುದು ಬೇಡ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಟಿಕೆಟ್ ನೀಡಲಾಗುತ್ತಿದೆ. ಹೃದಯರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಮಟ್ಟದಲ್ಲೂ ಚರ್ಚೆಯಾಗಿದೆ ಎಂದು ಅಶೋಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.