ನವದೆಹಲಿ,ಮಾ.5: ಜೈಲಿನಲ್ಲಿ ಸಹ ಕೈದಿಗಳ ಪ್ರೇರೇಪಿಸಿ ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಕರ್ನಾಟಕ ಸೇರಿದಂತೆ ದೇಶದ 17 ಕಡೆ ದಾಳಿ ನಡೆಸಿದೆ.
ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್ ಪತ್ತೆಯಾಗಿತ್ತು.
ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.
ಇದೇ ಜನವರಿ 12 ರಂದು ಎನ್‌ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಚಾರ್ಜ್‌ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ
ಸಹ ಖೈದಿಗಳನ್ನ ಸೆಳೆದು ಉಗ್ರ ಕೃತ್ಯಕ್ಕೆ ಪ್ರೇರೇಪಣೆ ನೀಡಿದ ಹಿನ್ನೆಲೆಯಲ್ಲಿ ಇಂದು ಏಳು ರಾಜ್ಯದಲ್ಲಿ ಎನ್‌ಐಎ ದಾಳಿ ನಡೆಸಿದ್ದು ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯ ತೂಬಾ ಲೇಔಟ್ ಮತ್ತು ಸರಾಯಿ ಪಾಳ್ಯದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಆರ್‌ಟಿ ನಗರ ಮನೆಯಲ್ಲಿ ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಮುಂದಾಗಿದ್ದುದು ತನಿಖೆ ವೇಳೆ ಗೊತ್ತಾಗಿತ್ತು.
ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳ
ಪೌಡರ್ ರೂಪದ ಕೆಮಿಕಲ್ ಬಳಸಿ ಸಿದ್ದಪಡಿಸಿ ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟಿದ್ದರು.
ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ ಮತ್ತು ಎಫ್ ಎಸ್ ಎಲ್ ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಜೊತೆಗೆ ಏನೇನು ಮಾಡಬೇಕೆಂಬ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದ,ಅಲ್ಲದೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಎಂಬದುರ ನೀಲನಕ್ಷೆಯನ್ನೂ ಸಿದ್ಧ ಮಾಡಿಕೊಂಡಿದ್ದ.
ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿದೆ.