Fri. Mar 6th, 2026

ಮೋದಿ ವಿರುದ್ಧ ಅವಹೇಳನ ಪದ ಬಳಕೆ: ಪರಿಷತ್ ನಲ್ಲಿ ಕೋಲಾಹಲ

Share this with Friends

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಿದ ಪದ ಕೋಲಾಹಲ‌ ಸೃಷ್ಟಿಗೆ ಕಾರಣವಾಯಿತು. ಆಡಳಿತ ವಿಪಕ್ಷಗಳ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಕಲಾಪವನ್ನು ನಾಳೆ ಮುಂದೂಡಿಕೆ ಮಾಡಲಾಯಿತು. ಬಳಿಕ ಸಭಾಪತಿ ಕಚೇರಿಗೆ ತೆರಳಿದ ಬಿಜೆಪಿ ನಿಯೋಗ ಪ್ರಧಾನಿ ವಿರುದ್ಧ ನಿಂದನಾರ್ಹವಾದ ಪದ ಬಳಕೆ ಮಾಡಿದ ಸದಸ್ಯರ ಅಮಾನತ್ತಿಗೆ ಆಗ್ರಹಿಸಿ ದೂರು ಸಲ್ಲಿಸಿತು.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ದ ವೇಳೆ ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್​ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ್ರೋಹಿ ಎನ್ನುವ ಪದ ಬಳಕೆ ಮಾಡಿ ವಿವಾದ ಸೃಷ್ಟಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.ನಜೀರ್ ಅಹ್ಮದ್​​ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು ಈ ವೇಳೆಉಭಯ ಪಕ್ಷಗಳ ಸದಸ್ಯರ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಕೂಡಲೇ ಎಚ್ಚೆತ್ತ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿದರು.

ಸದನ ಮುಂದೂಡಿಕೆಯಾದ ಬಳಿಕ ಸಭಾಪತಿಗಳ ಕಚೇರಿಗೆ ತೆರಳಿದ ಬಿಜೆಪಿ ನಿಯೋಗ ಸದನದ ಘನತೆ ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿ ವರ್ತಿಸಿರುವ ನಸೀರ್ ಅಹ್ಮದ್, ರಮೇಶ್ ಬಾಬು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸದನದ ನಿಯಮಗಳ ಪ್ರಕಾರ  ತಕ್ಷಣವೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರು ಸಲ್ಲಿಸಿತು.

ಇಂದು ಸದನದ ಕಲಾಪದ ವೇಳೆ ಕಾಂಗ್ರೇಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ನಸೀರ್ ಅಹ್ಮದ್ ಅವರು, ದೇಶದ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ‘ರಾಷ್ಟ್ರದ್ರೋಹಿ, ದೇಶದ್ರೋಹಿ’ ಎಂದು ಹಾಗೂ ಇನ್ನೊಬ್ಬ ಸದಸ್ಯ ರಮೇಶ್ ಬಾಬು ಅವರು ನಾಲಾಯಕ್ ಎಂದು ನಿಂದನಾತ್ಮಕವಾಗಿ ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ ಹಾಗೂ ಅಸಹ್ಯಕರ.ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಂವಿಧಾನ ಹಾಗೂ ರಾಷ್ಟ್ರದ ಗೌರವದ ಮೇಲಿನ ನೇರ ದಾಳಿ‌ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 


Share this with Friends

Related Post