ಬೆಂಗಳೂರು: “ನಾವು ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಾಗವನ್ನು ಬಳಸಿಕೊಳ್ಳುತ್ತಿರುವುದು ನಿಜ. ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾದ ಶತಮಾನೋತ್ಸವದ ನೆನಪಿಗಾಗಿ 100 ಭವನಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಪಕ್ಷದ ದೇವಾಲಯ ಕಟ್ಟಲು ನಾವು ಈ ನಿರ್ಧಾರ ಮಾಡಿದ್ದೇವೆ, ಇದನ್ನು ಮಾಡಿಯೇ ತೀರುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಮಂಜೂರು ಮಾಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿ ನೂರಾರು ಕಡೆ ವಿವಿಧ ಟ್ರಸ್ಟ್ ಹೆಸರಿನಲ್ಲಿ ಜಾಗ ಪಡೆದಿದ್ದಾರೆ. ಚಾಣಾಕ್ಯ ವಿವಿಗೆ 10 ಕೋಟಿ ರೂ. ಬೆಲೆಬಾಳುವ ಜಾಗವನ್ನು ಕೇವಲ 50 ಲಕ್ಷಕ್ಕೆ ನೀಡಿದ್ದಾರೆ. ಆರ್.ಎಸ್.ಎಸ್ ಕಚೇರಿಗಳು ಹೇಗೆ ನಿರ್ಮಾಣವಾದವು? ಅವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ” ಎಂದು ಗುಡುಗಿದರು.
ಕಾನೂನು ಬದ್ಧವಾಗಿಯೇ ಮಂಜೂರಾತಿ:
“ನಾವು ಎಲ್ಲಾ ಮಾನದಂಡ ಮತ್ತು ಅರ್ಹತೆಗಳ ಆಧಾರದ ಮೇಲೆ 5-10 ಸಾವಿರ ಚದರ ಅಡಿ ಜಾಗವನ್ನು ಮಂಜೂರು ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಅಕ್ರಮವಿಲ್ಲ. ಯಾರಾದರೂ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹತ್ತಲಿ, ನಾವು ಎದುರಿಸಲು ಸಿದ್ಧ” ಎಂದು ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮಹದೇವಪ್ಪ ಬಹಳ ದೊಡ್ಡವರು, ಅವರ ಬಗ್ಗೆ ಮಾತನಾಡುವುದಿಲ್ಲ:
ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತ ಕಿಚ್ಚು ಮತ್ತೆ ಹತ್ತಿಕೊಂಡಿದ್ದು, ಸಚಿವ ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. “ಮಹದೇವಪ್ಪ ಅವರು ಬಹಳ ದೊಡ್ಡವರು, ಅವರೀಗ ಹೈಕಮಾಂಡ್ ಭಾಗವಾಗಿದ್ದಾರೆ. ಅವರ ಬಗ್ಗೆ ನಾನೇನು ಹೇಳಲಾರೆ” ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ನಾಯಕತ್ವ ಬದಲಾವಣೆ ಹಾಗೂ ಸಚಿವರ ಹೇಳಿಕೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿ, “ಮಹದೇವಪ್ಪ ಅಥವಾ ಇತರ ನಾಯಕರ ಹೇಳಿಕೆಗಳಿಗೆ ನಾನು ಉತ್ತರ ನೀಡಲು ತಯಾರಿಲ್ಲ. ಅವರ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ನಾಯಕತ್ವದ ಕುರಿತು ಹೈಕಮಾಂಡ್ ಮಟ್ಟದಲ್ಲಿ ಆಗಿರುವ ತೀರ್ಮಾನ ಏನೆಂಬುದು ಗುಟ್ಟಾಗಿ ಉಳಿದಿಲ್ಲ. ಸಮಯ ಬಂದಾಗ ಸ್ವತಃ ಸಿದ್ದರಾಮಯ್ಯ ಅವರೇ ರಾಜ್ಯದ ಜನತೆಗೆ ಸಂದೇಶ ನೀಡಲಿದ್ದಾರೆ” ಎಂದು ತಿಳಿಸಿದರು.
ಸಚಿವ ಮಹದೇವಪ್ಪ ಅವರು ನಾಯಕತ್ವದ ವಿಚಾರವಾಗಿ ನೀಡುತ್ತಿರುವ ಸರಣಿ ಹೇಳಿಕೆಗಳು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಶಿವಕುಮಾರ್ ಅವರು “ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ” ಎಂದು ಎಚ್ಚರಿಕೆಯ ದಾಟಿಯಲ್ಲಿ ಉತ್ತರಿಸಿದ್ದಾರೆ.
ಶಾಸಕರ ವಿದೇಶ ಪ್ರವಾಸದ ಬಗ್ಗೆ ನನಗೇನು ಗೊತ್ತಿಲ್ಲ:
ಇದೇ ವೇಳೆ ಶಾಸಕರ ವಿದೇಶ ಪ್ರವಾಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಡಿ.ಕೆ.ಶಿ, “ಶಾಸಕರ ಪ್ರವಾಸದ ಬಗ್ಗೆ ಮಾಧ್ಯಮಗಳ ಮೂಲಕವಷ್ಟೇ ನನಗೆ ತಿಳಿದಿದೆ. ಅದು ಅವರ ವೈಯಕ್ತಿಕ ಪ್ರವಾಸವೋ ಅಥವಾ ಯಾರಾದರೂ ಕಳುಹಿಸುತ್ತಿದ್ದಾರೋ ನನಗೆ ಮಾಹಿತಿ ಇಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.

