Fri. Nov 1st, 2024

ಕೇರಳದ ಮೃತ ವ್ಯಕ್ತಿ ಕುಟುಂಬಕ್ಕೆ ತೆರಿಗೆದಾರರ ಹಣ ಬಳಕೆ:ವಿಜಯೇಂದ್ರ ಆರೋಪ

Share this with Friends

ಬೆಂಗಳೂರು,ಫೆ.20: ರಾಜ್ಯದ ಆನೆ ದಾಳಿಯಿಂದ ಕೇರಳದ ವಯನಾಡಿನಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ತೆರಿಗೆದಾರರ ಹಣ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲಹೆ ಮೇರೆಗೆ ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ನಿಜಕ್ಕೂ ಅವಮಾನಕರ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ವಯನಾಡು ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ 15 ಲಕ್ಷ ರೂ.ಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ರಾಜ್ಯ ಸರ್ಕಾರವನ್ನು ವಿಜಯೇಂದ್ರ ಎಕ್ಸ್ ಕತೆಯಲ್ಲಿ ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಬರಗಾಲ ಕಾಡುತ್ತಿದೆ, ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ತುರ್ತು ಅಗತ್ಯಗಳತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿರುವುದು ನಿಜಕ್ಕೂ ವಿಷಾದನೀಯ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ ಮೆಚ್ಚಿಸಲು ಕರ್ನಾಟಕದ ತೆರಿಗೆದಾರರ ಹಣವನ್ನು ಅನೈತಿಕವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವರುಗಳು ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ‌

ರಾಹುಲ್ ಗಾಂಧಿ ಸೂಚನೆ ಬೆನ್ನಲ್ಲೇ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು ರಾಹುಲ್ ಸಲಹೆಯಂತೆ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ಪತ್ರ ಬರೆದಿದ್ದಾರೆ.

ಜೊತೆಗೆ ಈ ಬಗ್ಗೆ ಬೀದರ್‌ನಲ್ಲಿ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಕೇರಳ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂದಿದ್ದಾರೆ.

ಮಾನವೀಯ ನೆಲೆಯಲ್ಲಿ ಪಕ್ಷದ ವತಿಯಿಂದ ಪರಿಹಾರ ನೀಡಲಿ, ಆದರೆ ಕಾಡಾನೆಗಳಿಗೂ ರಾಜ್ಯದ ಗಡಿಗಳನ್ವಯ ವ್ಯವಹರಿಸಿ, ಯಾರದ್ದೋ ರಾಜಕೀಯ ಲಾಭಕ್ಕೆ ಸರ್ಕಾರದ ಖಜಾನೆ ಹಣ ಬಳಸುವುದು ಸಮಂಜಸವಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.


Share this with Friends

Related Post