Fri. Mar 6th, 2026

ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ:ಹೂಡಿಕೆದಾರರಿಗೆ ಸಿಎಂ ಕರೆ

Share this with Friends

ಬೆಂಗಳೂರು:ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದ್ದು, ನಮ್ಮ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು,  ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು ಕರ್ನಾಟಕ ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ನೀತಿ -ನಾವೀನ್ಯತೆ ಯ ರೂಪಿಸುವಲ್ಲಿ ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿಯೇ ಭಾರತದ ಮೊದಲ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದೇವೆ ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಸರ್ಕಾರದ ದೂರದೃಷ್ಟಿಯ ಆಡಳಿತದ ಪರಿಣಾಮವಾಗಿ , ಜಾಗತಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಸಕ್ರಿಯವಾಗಿ ಪಾಲ್ಗೊಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ಪರಿಸರ ವ್ಯವಸ್ಥೆಯು ವಿಶ್ವದರ್ಜೆಯ ಇಂಜಿನಿಯರಿಂಗ್, ಪಾರದರ್ಶಕ ನೀತಿ , ಸದೃಢ ಐಪಿ ಸಂಸ್ಕೃತಿ ಹಾಗೂ ವೈವಿಧ್ಯಮಯ ಜಾಗತಿಕ ಸಮುದಾಯಗಳನ್ನು ಒಳಗೊಂಡಿದೆ. ನಮ್ಮ ವಾಣಿಜ್ಯ ಪರಿಸರಕ್ಕೆ ಉನ್ನತಮಟ್ಟದ ಕಾನೂನು, ಆರ್ಥಿಕ ಹಾಗೂ ತಾಂತ್ರಿಕ ಬಲದ ಬೆಂಬಲವಿದೆ. ವಿಶೇಷವಾಗಿ ಬೆಂಗಳೂರಿನ ಹವಾಮಾನ, ಬಹುಸಂಸ್ಕೃತಿಗಳು ವಿಶ್ವದ ಜನರನ್ನು ಆಕರ್ಷಿಸುತ್ತವೆ.  ಒಟ್ಟಾರೆ ,ರಾಜ್ಯವು ಹೂಡಿಕೆದಾರರಿಗೆ ಸಂಶೋಧನೆಯಿಂದ ಮಾರುಕಟ್ಟೆಯವರೆಗೂ, ಮೂಲಸೌಕರ್ಯದಿಂದ ಕೌಶಲ್ಯದವರೆಗಿನ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಿದ್ದು, ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂದರು.

ಭಾರತದ ಐಟಿ ರಫ್ತಿನಲ್ಲಿ ನಾವು 42% ಕೊಡುಗೆ ನೀಡುತ್ತೇವೆ, ಇದರ ಮೌಲ್ಯ 3.2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು, ಮತ್ತು ಈ ಪ್ರಗತಿ ವರ್ಷದಿಂದ ವರ್ಷಕ್ಕೆ 27% ರಷ್ಟು ವೇಗವಾಗಿ ಬೆಳೆಯುತ್ತಿದೆ. ರಾಜ್ಯವು 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ, ಇದು ಭಾರತದ ಒಟ್ಟು ಕಂಪನಿಯ ಮೂರನೇ ಒಂದು ಭಾಗವಾಗಿದೆ.  ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಅನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್-ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ ಎಂದರು.

ಕ್ವಾಂಟಮ್ ತಂತ್ರಜ್ಞಾನಕ್ಕೆ ಒತ್ತು ನೀಡಿದ ಮೊದಲ ರಾಜ್ಯ ಕರ್ನಾಟಕ:

ಡೀಪ್ ಸೈನ್ಸ್ ಮತ್ತು ಸುಧಾರಿತ ಇಂಜಿನಿಯರಿಂಗ್ ವ್ಯವಸ್ಥೆ ಒದಗಿಸಲು ರಾಜ್ಯ ಬದ್ಧವಾಗಿದ್ದು, ಎಐ, ಸೈಬರ್-ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಷನ್ ಮತ್ತು ರೊಬೊಟಿಕ್ಸ್ನಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಕ್ವಾಂಟಮ್ ತಂತ್ರಜ್ಞಾನದ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಮುಂದಾಗಿರುವ ನಮ್ಮ ಸರ್ಕಾರ, ಮುಂದಿನ ಪೀಳಿಗೆಗಾಗಿ ಟೈರ್ 2 ನಗರಗಳನ್ನು ನಾವಿನ್ಯತೆಯ ಕ್ಲಸ್ಟರ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ .ಈ ಎಲ್ಲ ಕ್ರಮಗಳು ಕೇವಲ ಆರ್ಥಿಕತೆಯನ್ನು ಕೇಂದ್ರೀಕರಿಸದೇ, ಸಮಾನ ಬೆಳವಣಿಗೆಗೂ ಬದ್ಧವಾಗಿವೆ ಎಂದರು.

ರಾಜ್ಯದ ಪ್ರತಿ ಜಿಲ್ಲೆಯೂ ಹಾಗೂ ಯುವಪೀಳಿಗೆಯು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ನಮ್ಮ ಆಡಳಿತದ ಮಾದರಿಯು ಪಾರದರ್ಶಕತೆ, ನಿರೀಕ್ಷಿತ ನಡೆ ಹಾಗೂ ಸ್ಥಿರತೆಗೆ ಬದ್ಧವಾಗಿದೆ. ನಮ್ಮ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು,  ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಮುಂದುವರೆದಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಲಿ, ಸ್ಟಾರ್ಟ್ ಅಪ್ ಆಗಲಿ, ಶೈಕ್ಷಣಿಕ ಸಂಶೋಧನೆಯಾಗಲಿ, ಯಾವುದೇ ಕ್ಷೇತ್ರದ ಬಂಡವಾಳ ಹೂಡಿಕೆ ಕರ್ನಾಟಕ ರಾಜ್ಯ ತಾಣವಾಗಿವೆ. ಏಐ , ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.


Share this with Friends

Related Post