ಚಿಕ್ಕಮಗಳೂರು, ಮಾ.2: ಜಿಲ್ಲೆಯ ನರಸಿಂಹರಾಜಪುರದ ಬಸವಕೇಂದ್ರದ ಅನುಭವ ಮಂಟಪದಲ್ಲಿ ವಿಶೇಷ ವಿವಾಹ ನೆರವೇರಿತು.
ನರಸಿಂಹರಾಜಪುರದ ದೊಡ್ಡಿನತಲೆ ಪುಷ್ಪ ಬಸವರಾಜು ದಂಪತಿ ಪುತ್ರಿ ವಚನ ಹಾಗೂ ಚಾಮರಾಜನಗರ ಜಿಲ್ಲಾ ವಿ. ಸಿ. ಹೊಸೂರಿನ ಮೀನಮ್ಮ ಪ್ರಕಾಶ ಅವರ ಪುತ್ರ ಮಂಜುನಾಥ್ ಅವರ ಕಲ್ಯಾಣ ಮಹೋತ್ಸವ ನರಸಿಂಹರಾಜಪುರದ ಬಸವಕೇಂದ್ರದ ಅನುಭವ ಮಂಟಪದಲ್ಲಿ ಪೂಜ್ಯ ಶ್ರೀ ಬಸವಯೋಗಿಪ್ರಭುಗಳ ನೇತೃತ್ವದಲ್ಲಿ ನಿಜಚಾರಣೆಯ ಮೂಲಕ ನಡೆದುದು ವಿಶೇಷ.
ಈ ವೇಳೆ ಆಶೀರ್ವಾಚನ ನೀಡಿದ ಬಸವಯೋಗಿ ಪ್ರಭುಗಳು ಲಿಂಗಾಯತ ಧರ್ಮದವರು ಯಾವುದೇ ಮೂಢನಂಬಿಕೆ ಆಚರಣೆಗಳನ್ನು ಮಾಡಬಾರದು ಎಂದು ತಿಳಿಹೇಳಿದರು.
ಬಸವಾದಿ ಶರಣರ ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಗಳ ಅಷ್ಟ ವರಣಗಳ ಮೂಲಕ ಕಲ್ಯಾಣ ಮಹೋತ್ಸವ ನಡೆಯಬೇಕು.
ಅಕ್ಕಿ ಚೆಲ್ಲುವುದು ಹಾಲು ತುಪ್ಪ ವ್ಯರ್ಥ ಮಾಡುವುದು ಶಾಸ್ತ್ರ ಪಂಚಾಂಗ ಕೇಳುವುದು ಲಿಂಗಾಯತ ಧರ್ಮದ ಆಚರಣೆ ಅಲ್ಲ. ಆಡಂಬರದ ಮದುವೆ ಮಾಡುವುದು ಸಾಲದ ಸುಳಿಗೆ ಸಿಲುಕಿ ನಲುಗುವುದಕ್ಕಿಂತ ಸರಳ ವಚನ ಮಾಂಗಲ್ಯ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಸತಿ ಪತಿಗಳು ಜೀವನದಲ್ಲಿ ಏನೆ ಕಷ್ಟ ಬಂದರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಪರನಿಂದೆ, ಪರಹಿಂಸೆ, ಪರಧನ, ಪರಸತಿ,ಪರಪತಿ ಪಾತಕಗಳನ್ನು ಮಾಡದೇ ಕಾಯಕ ಧಾಸೋಹ ಬಸವಯೋಗವನ್ನ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
ಬಸವಣ್ಣನವರ ವಚನಗಳನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ನೂತನ ಸತಿ ಪತಿಗಳು ಬದುಕಬೇಕು ಎಂದು ಬಸವ ಮಾರ್ಗವನ್ನು ತಿಳಿಸಿದರು.
ಈ ರೀತಿಯ ಸರಳ ವಚನ ಮಾಂಗಲ್ಯ ಹೆಚ್ಚಿನ ರೀತಿಯಲ್ಲಿ ನಡೆಯಬೇಕು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಮೂಢನಂಬಿಕೆ ತೋಲಗಿಸಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗದ ಮುರುಘ ಮಠದ ವಚನ ಗಾಯಕರಾದ ತೋಟಪ್ಪ,ವಧು ಮತ್ತು ವರನ ಕುಟುಂಬದವರು, ಪುಟ್ಟಸ್ವಾಮಿ, ಸೋಮೇಶ್, ನತೀಶ್ ಮತ್ತಿತರರ ಸಮ್ಮುಖದಲ್ಲಿ ವಚನ ಮಾಂಗಲ್ಯ ನೆರವೇರಿತು.