Mon. Dec 23rd, 2024

ಇಡಿ ಅಧಿಕಾರಿಗಳಿಂದ ‌ವಾಲ್ಮೀಕಿ ನಿಗಮದ ಅಧಿಕಾರಿಗಳಿಗೆ ಬೆದರಿಕೆ:ಡಿಕೆಶಿ

Share this with Friends

ಬೆಂಗಳೂರು,ಜು.23: ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಒತ್ತಾಯವಾಗಿ ಸಿಎಂ ಮತ್ತು ಸಚಿವರ ಹೆಸರು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ದೂರಿದರು.

ಇಡಿ ಅಧಿಕಾರಿಗಳ ವರ್ತನೆ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಸಚಿವರುಗಳು ಹಾಗೂ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ ವೇಳೆ ಡಿಕೆಶಿ ಮಾತನಾಡಿದರು.

ಆ ಮೂಲಕ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿದು, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಹಾಗಾಗಿ ಇದನ್ನು ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ತಿಳಿದ ತಕ್ಷಣ ಎಸ್‌ ಐಟಿ ರಚಿಸಿ, ಹಲವರನ್ನು ಬಂಧಿಸಿ, ಶೇ.50ಕ್ಕೂ ಹೆಚ್ಚಿನ ಹಣವನ್ನು ತೆಲಂಗಾಣದಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ನಮ್ಮ ಸಚಿವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ, ಆದರೆ ಇಡಿ ಮಧ್ಯಪ್ರವೇಶ ಮಾಡಿದೆ, ನಮ್ಮ ತನಿಖೆಯಲ್ಲಿ ಲೋಪವಿದ್ದಾಗ ಬರಬಹುದಿತ್ತು. ಆದರೆ ನಮ್ಮ ತನಿಖೆ ಮುಗಿಯುವ ಮುನ್ನವೇ ಮಧ್ಯಪ್ರವೇಶ ಮಾಡಿದ್ದಾರೆ ಎಂದು ಅಸಮಾಧಾನ ಪಟ್ಟರು.

ಇಡಿ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಕಲ್ಲೇಶ್ ಅವರಿಗೆ ಬೆದರಿಕೆ ಹಾಕಿ, ಈ ಪ್ರಕರಣದಲ್ಲಿ ಮಂತ್ರಿ, ಮುಖ್ಯಮಂತ್ರಿ ಹೆಸರು ಹೇಳಿಸುವ ಒತ್ತಡ ಹಾಕುತ್ತಿದ್ದಾರೆ,ಇವರ ಹೆಸರು ಹೇಳದಿದ್ದರೆ ಏಳು ವರ್ಷ ಜೈಲು ಶಿಕ್ಷೆ ಅನುಭಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ,ಇದರಿಂದ ಮನನೊಂದ ಅಧಿಕಾರಿ, ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ದೂರಿನ ಅನ್ವಯ ನಿನ್ನೆ ಇ.ಡಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ, ಇಡಿ ಅಧಿಕಾರಿ ಮಿತ್ತಲ್ ಎಂಬುವವರು ಎ1, ಮುರಳಿ ಕಣ್ಣನ್ ಎಂಬುವವರು ಎ2 ಆಗಿದ್ದಾರೆ. ಇವರಿಬ್ಬರು ಸೇರಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ ಹೆಸರು ಹೇಳಬೇಕು, ಅವರ ಮಾರ್ಗದರ್ಶನದಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿದೆ ಎಂದು ಡಿಸಿಎಂ ಹೇಳಿದರು.


Share this with Friends

Related Post